ಹೆದ್ದಾರಿ ಪಕ್ಕದಲ್ಲಿ ಕುಸಿದ ಬೃಹತ್ ಸ್ಲಾಬ್
ನೆಲಮಂಗಲ.ಸೆ.೪- ಟೋಲ್ ಕಂಪನಿಯ ನಿರ್ಲಕ್ಷ್ಯದಿಂದ ನಗರಕ್ಕೆ ದೊಡ್ಡ ಕಂಟಕವೊಂದು ಕಾದಿದೆ. ವಾಹನ ಸವಾರರು ಎಚ್ಚರ ತಪ್ಪಿದರೆ ಅನಾಹುತ ಎದುರಾಗುವರಲ್ಲಿ ಸಂಶಯವೇ ಇಲ್ಲ.
ನಲಮಂಗಲದ ಕುಣಿಗಲ್ ಬೈಪಾಸ್, ಮಾಕಳಿ, ಮಾದನಾಯಕನಹಳ್ಳಿ, ಮಾದಾವಾರ ರಸ್ತೆಯ ಬಳಿ ಬೃಹತ್ ಗುಂಡಿ ತೆರೆದಿದೆ. ನಗರದಲ್ಲಿ ಇತ್ತೀಚೆಗೆ ಮಳೆ ಬಂದಿದ್ದರಿಂದ ರಸ್ತೆ ಪಕ್ಕದ ಬೃಹತ್ ಸ್ಲಾಬುಗಳು ಕುಸಿದು ವಾಹನ ಸವಾರರ ಜೀವಕ್ಕೆ ಮೃತ್ಯು ಕೂಪವಾಗಿ ಪರಿಣಮಿಸಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯದ ಸುಮಾರು ೧೭ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗುಂಡಿಗಳ ಗಂಡಾಂತರದಿಂದ ಪರಿಸ್ಥಿತಿ ಹದಗೆಟ್ಟಿದೆ.
ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ತರಲಿದೆ.
ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಟೋಲ್ ಹಣ ಸಂಗ್ರಹಿಸುವ ಟೋಲ್ ಕಂಪನಿ ನಿರ್ವಹಣೆ ಮಾಡಬೇಕಿದ್ದು, ಸವಾರರ ಜೀವದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಮಸ್ಯೆಗಳ ಆಗರವಾಗಿರುವ ನೆಲಮಂಗಲ ಗೊರಗುಂಟೆಪಾಳ್ಯ ನಡುವಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಸವಾರರ ಜೀವಕ್ಕೆ ಯಮಸ್ವರೂಪಿಯಾಗಿದೆ.