ವ್ಯವಹಾರ ಅರ್ಥಶಾಸ್ತ್ರ ವಿಷಯ ಅರ್ಥಶಾಸ್ತ್ರದ ಅಧ್ಯಾಪಕರೇ ಬೋಧಿಸಲು ಕ್ರಮಕ್ಕೆ ಕುಲಪತಿಗಳಿಗೆ ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ ಸೆ.4, ನೂತನ ರಾಜ್ಯ ಶಿಕ್ಷಣ ನೀತಿ ಅನ್ವಯ ವಾಣಿಜ್ಯ ವಿಭಾಗದಲ್ಲಿ ಅಳವಡಿಸಿಕೊಂಡ ಅರ್ಥಶಾಸ್ತ್ರ ವಿಷಯ ಬೋಧನೆಯಲ್ಲಿ ಅರ್ಥಶಾಸ್ತ್ರದಲ್ಲಿ  ಸ್ನಾತೋಕೋತ್ತರ ಪದವಿ ಪಡೆದವರಿಗೆ ಮಾತ್ರ ಅವಕಾಶ ನೀಡುವಂತೆ ಒತ್ತಾಯಿಸಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ್ರ ಸ್ನಾತಕ ಅಧ್ಯಾಪಕರ ಸಂಘದವತಿಯಿಂದ  ಕುಲಪತಿಗಳಾದ ಪ್ರೊ.ಮುನಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ನೂತನವಾಗಿ ರಾಜ್ಯ ಶಿಕ್ಷಣ ನೀತಿಯು ಜಾರಿಯಾಗಿದ್ದು, ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ವ್ಯವಹಾರ ಅರ್ಥಶಾಸ್ತ್ರ ವಿಷಯವನ್ನು ಅಳವಡಿಸಿರುವುದು ಸ್ವಾಗತಾರ್ಹದ ಸಂಗತಿ. ಆದರೆ ವ್ಯವಹಾರ ಅರ್ಥಶಾಸ್ತ್ರದ ವಿಷಯವನ್ನು ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಾಪಕರೇ ಬೋಧಿಸಬೇಕೆಂದು ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ. ಅರ್ಥಶಾಸ್ತ್ರ ವಿಷಯವನ್ನು ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರೇ ಬೋಧಿಸಬೇಕು. ಹಾಗಾಗಿ ವ್ಯವಹಾರ ಅರ್ಥಶಾಸ್ತ್ರವನ್ನು ಬಳ್ಳಾರಿಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಅರ್ಥಶಾಸ್ತ್ರದ ಅಧ್ಯಾಪಕರಿಗೆ ಬೋಧಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು.
ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ವ್ಯವಹಾರ ಅರ್ಥಶಾಸ್ತ್ರವನ್ನು ಅರ್ಥಶಾಸ್ತ್ರದ ಅಧ್ಯಾಪಕರೇ ಬೋಧಿಸುತ್ತಿದ್ದಾರೆ ಎಂದು ಸಹ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮೌಖಿಕವಾಗಿ ಕುಲಪತಿಗಳಿಗೆ ಅಧ್ಯಾಪಕರ ಸಂಘದ ಡಾ.ಹುಚ್ಚೂಸಾಬ್ ಅವರು ಮನವರಿಕೆ ಮಾಡಿದ್ದಾರೆ.
ಮನವಿಯನ್ನು ಸ್ವೀಕರಿಸಿರುವ ಕುಲಪತಿಗಳಾದ ಪ್ರೊ.ಮುನಿರಾಜು ಅವರು ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಧ್ಯಾಪಕರ ಸಂಘ ಪದಾಧಿಕಾರಿಗಳು ತಿಳಿಸಿದ್ದಾರೆ. ಈ  ಸಂದರ್ಭದಲ್ಲಿ  ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಸಂಘದ ಜಿಲ್ಲಾ ಸದಸ್ಯರಾದ ಡಾ.ಶೋಭರಾಣಿ, ಡಾ.ಕೃಷ್ಣ .ಡಾ.ಸುರೇಶ ಸೊನ್ನದ  ಗಂಟೆಪ್ಪ ಶೆಟ್ಟಿ,  ಡಾ.ಹುಚ್ಚೂಸಾಬ್. ಡಾ.ಶ್ರೀನಿವಾಸ ರೆಡ್ಡಿ ಬಿ,  ಡಾ.ಚನ್ನಬಸವಯ್ಯ, ಶ್ರೀಮತಿ ರಾಜಶ್ರೀಪಾಟೀಲ್, ಅತಿಥಿ ಉಪನ್ಯಾಸಕರಾದ ಡಾ.ಹನುಮೇಶ್ ಜೋಳದರಾಶಿ, ಶ್ರೀ ಫರೀದಾ ಬೇಗಂ, ಕೆ.ಎಂ.ವೀರೇಶಯ್ಯ, ಹೊನ್ನೂರ್‍ಸಾಬ್, ಸೇರಿದಂತೆ  ಹತ್ತಾರು ಅರ್ಥಶಾಸ್ತ್ರದ ಅಧ್ಯಾಪಕರು ಪಾಲ್ಗೊಂಡಿದ್ದರು