ಲಿಂಗಸುಗೂರು ಕೃಷಿ ಇಲಾಖೆ ಉಪನಿರ್ದೇಶಕರ ಕಛೇರಿ-೨, ಸಿಂಧನೂರಿಗೆ ಸ್ಥಳಾಂತರಆದೇಶ ಹಿಂಪಡೆಯಲು ಸಿಎಂಗೆ ಕೆಪಿಆರ್ ಎಸ್ ಆಗ್ರಹ
ಲಿಂಗಸ್ಗುರೂರು, ಸೆ.೪: ತಾಲೂಕಿನ ಕೃಷಿ ಉಪನಿರ್ದೇಶಕರ ಕಛೇರಿ ಸಿಂಧನೂರುಗೆ ಸ್ಥಳಾಂತರ ಮಾಡಲಾಗಿದ್ದು ಕೂಡಲೇ ಈ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ಸ್ಥಳಾಂತರವಾದರೆ ಈ ಭಾಗದ ರೈತರು ಸಮಸ್ಯೆಗಳ ಸುರಿಮಳಿಯನ್ನು ಎದುರಿಸಬೇಕಾಗುತ್ತದೆ. ಲಿಂಗಸುಗೂರು ತಾಲೂಕಿನಿಂದ ಸುಮಾರು ೭೦ ಕ್ಕೂ ಕಿ.ಮೀ. ದೂರದಲ್ಲಿರುವ ಸಿಂಧನೂರಿಗೆ ರೈತರು ಪ್ರಯಾಣೀಸಬೇಕಾಗುತ್ತದೆ. ಇದಕ್ಕೆ ೫೦೦ ರಿಂದ ೧೦೦೦ ರೂಪಾಯಿ ಖರ್ಚು ತಗಲುತ್ತದೆ. ಅಲ್ಲದೇ ಇಡೀ ದಿನ ಇದಕ್ಕೆಂದೆ ಮೀಸಲಿಡಬೇಕಾಗುತ್ತದೆ. ಈಗಾಗಲೇ ತಾಲೂಕಿನ ಮಂಜೂರಾತಿ ಹಂತದಲ್ಲಿದ್ದ ಪ್ರಾದೇಶಿಕ ಸಾರಿಗೆ ಕಛೇರಿ ಜಿಲ್ಲಾ ನ್ಯಾಯಾಲಯ ಹಾಗೂ ಕೆಪಿಟಿಸಿಎಲ್ ಕಛೇರಿಗಳು ಸಿಂಧನೂರಿಗೆ ಸ್ಥಳಾಂತರವಾಗಿವೆ. ಒಂದೊಂದಾಗಿ ಕಛೇರಿಗಳನ್ನು ಸ್ಥಳಾಂತರಕ್ಕೆ ಕೈಹಾಕುತ್ತಿರುವ ವಿಪರ್ಯಾಸ. ಇದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಸುಗೂರು ಕ್ಷೇತ್ರ ದಿವಾಳಿಯತ್ತ ಸಾಗಿದೆ. ಜನಪ್ರತಿನಿಧಿಗಳು ತಾಲೂಕಿನ ಕಛೇರಿಗಳು ಸ್ಥಳಾಂತರವಾಗಿರುವುದಕ್ಕು ತಮಗೂ ಯಾವುದೇ ಸಂಬಂಧವಿಲ್ಲದಂತೆ ಬೆಂಗಳೂರು ದಿಲ್ಲಿ ಸುತ್ತುತ್ತಿದ್ದಾರೆ. ಕಷ್ಟಕ್ಕೆ ಕಲಬೇಡ ಊಟಕ್ಕೆ ಮರಿಬೇಡ ಎನ್ನುವಂತೆ ಲಿಂಗಸುಗೂರು ಕ್ಷೇತ್ರ ಶಾಸಕರು ವರ್ತಿಸುತ್ತಿದ್ದಾರೆ. ಕೃಷಿ ಉಪನಿರ್ದೇಶಕರು ೨ ಕಛೇರಿ ಸ್ಥಳಾಂತರವನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಈ ಕ್ಷೇತ್ರದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಷ್ಟೂ ಮಾಡದಿದ್ದರೆ ನಿಮ್ಮನ್ನು ಶಾಸಕರು, ಮಾಜಿ ಶಾಸಕರು, ಸಚಿವರು, ಎಂಎಲ್ಸಿ ಗಳನ್ನು ಮಾಡಿದ ಕ್ಷೇತ್ರದ ಜನತೆಗೆ ನಿಮ್ಮಿಂದ ಪ್ರಯೋಜನ ಏನು ಉತ್ತರಿಸಿ ಎಂದು ಪ್ರಶ್ನಿಸಿದರು.
ಈ ಕೂಡಲೇ ಆದೇಶ ವಾಪಾಸ್ ಮಾಡಿಲ್ಲ ಅಂದರೆ ಬೃಹತ್ ಹೋರಾಟ ಮಾಡಲಾಗುತ್ತದೆಂದು ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಜಾಲಹಳ್ಳಿ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜಿಲ್ಲಾ ಕಾರ್ಯದರ್ಶಿ, ತಾಲೂಕು ಸಹ ಸಂಚಾಲಕ ನಿಂಗಪ್ಪ ಎಮ್., ಆಂಜನೇಯ ನಾಗಲಾಪೂರು, ಹನಮಂತ ಚಲುವಾದಿ, ಶಿವಪ್ಪ ವ್ಯಾಕರನಾಳ, ಸದ್ದಾಂ ಹುಸೇನ್, ಬಾಬಾಜಾನಿ, ಅಲ್ಲಾಭಕ್ಷ ದೇವಪೂರು ಕ್ರಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.