ಗಣೇಶೋತ್ಸವಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ
ಬೆಂಗಳೂರು.ಸೆ.೪-ಸಾರ್ವಜನಿಕ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಆಯಾ ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸುವಂತೆ ಬೆಸ್ಕಾಂ ಕೋರಿದೆ.
ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿಳಂಬವಿಲ್ಲದೇ, ನಿಯಮಾವಳಿಗಳ ಅನ್ವಯ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಉಪವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಹಬ್ಬದ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ಸಾವರ್ಜನಿಕರು ಕಾಳಜಿ ವಹಿಸಬೇಕು. ಗಣೇಶೋತ್ಸವಕ್ಕೆ ಬೆಳಕಿನ ವ್ಯವಸ್ಥೆ, ದೀಪಾಲಂಕಾರಕ್ಕೆ ಬೆಸ್ಕಾಂ ವತಿಯಿಂದ ಸಹಕಾರ ನೀಡಲಾಗುವುದು. ಸಾರ್ವಜನಿಕ ಗಣೇಶೋತ್ಸವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಕೈಗೊಳ್ಳ ಬೇಕಾದ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ವಿದ್ಯುತ್ ಅವಘಡಗಳಾಗದಂತೆ ಎಚ್ಚರವಹಿಸಿ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ತಾತ್ಕಲಿಕ ಸಂಪರ್ಕದ ಮಾಹಿತಿ:
ತಾತ್ಕಲಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ, ಎಲ್ಲಾ ಸಂಬಂಧಿತ (ಬಿಬಿಎಂಪಿ/ಬಿಡಿಎ/ಗ್ರಾಮ ಪಂಚಾಯಿತಿ/ಆರಕ್ಷಕ ಠಾಣೆ ಹಾಗೂ ಇನ್ನಿತರ) ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆದಿರಬೇಕು.
ನಿರಾಕ್ಷೇಪಣಾ ಪತ್ರ ಪಡೆದ ನಂತರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಮಾಣ ಮಾಡಿರುವ ಪೆಂಡಾಲ್ ಅಥವಾ ಸಮಾರಂಭ ಸ್ಥಳದ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತಾರೆ.
ವೈರಿಂಗ್ ಸುರಕ್ಷತೆ, ಎಂ.ಸಿ.ಬಿ ಮತ್ತು ಇಐಎ ಅಳವಡಿಕೆಯ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಸಮಾಪನ ವರದಿಯನ್ನು ಪಡೆದು ಸ್ಥಳ ಪರಿಶೀಲಿಸಿದ ನಂತರ ಸಂಪರ್ಕ ಕಲ್ಪಿಸ ಬೇಕು.
ತಾತ್ಕಾಲಿಕ ವಿದ್ಯುತ್ ಸಂಪರ್ಕದ ನಿರೀಕ್ಷಿತ ಸಮಯ ಮುಗಿದ ಬಳಿಕ ಅಂತಿಮ ರೀಡಿಂಗ್ ನಮೂದಿಸಿ ಮಾಪಕ ವಾಪಸ್ ನೀಡಬೇಕು.