ಸರಣಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.4; ರಾತ್ರೋರಾತ್ರಿ ಸರಣಿ ಮನೆಗಳ್ಳತನ ಮಾಡುತ್ತಿದ್ದ ನಾಲ್ವರ ಪೈಕಿ ಇಬ್ಬರು ಮನೆಗಳ್ಳರನ್ನು ಪೊಲೀಸರು ಬಂಧಿಸಿ, 6.20 ಲಕ್ಷ ಮೌಲ್ಯದ 80.740 ಗ್ರಾಂ ಚಿನ್ನ, 810 ಗ್ರಾಂ ಬೆಳ್ಳಿ ಆಭರಣಗಳನ್ನು ನ್ಯಾಮತಿ ಪೊಲೀಸಲು ಜಪ್ತು ಮಾಡಿದ್ದಾರೆ. ಚನ್ನಗಿರಿ ತಾ. ಸಂತೇಬೆನ್ನೂರು ಹೋಬಳಿ ಚಿಕ್ಕಬೆನ್ನೂರು ಗ್ರಾಮದ ಕೂಲಿ ಕೆಲಸಗಾರ ರಾಮ ಅಲಿಯಾಸ್ ಬುಡ್ಡ ರಾಮ(40 ವರ್ಷ) ಹಾಗೂ ಮಾವಿನಕಟ್ಟೆ ಗ್ರಾಮದ ಕೂಲಿ ಕೆಲಸಗಾರ ಟಿ.ಸಂತೋಷ್(48) ಬಂಧಿತ ಆರೋಪಿಗಳು. ನ್ಯಾಮತಿ ಪಟ್ಟಣ, ಸುರಹೊನ್ನೆ, ಗಂಡೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಕಳೆದ ಜುಲೈ, ಆಗಸ್ಟ್‌ ತಿಂಗಳಲ್ಲಿ ಸರಣಿ ಮನೆಗಳ್ಳತನ ನಡೆದಿದ್ದು, ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ 8 ಪ್ರತ್ಯೇಕ ಮನೆಗಳ್ಳತನ ಪ್ರಕರಣ ದಾಖಲಾಗಿದ್ದವು. ಎಸ್ಪಿ ಉಮಾ ಪ್ರಶಾಂತ್ ನಿರ್ದೇಶನದಲ್ಲಿ ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾರ್ಗದರ್ಶನದಲ್ಲಿ ನ್ಯಾಮತಿ ಇನ್ಸಪೆಕ್ಟರ್ ಎನ್.ಎಸ್‌.ರವಿ ನೇತೃತ್ವದಲ್ಲಿ ಪಿಎಸ್‌ಐ ಬಿ.ಎಲ್.ಜಯಪ್ಪ ನಾಯ್ಕ, ಸಿಬ್ಬಂದಿಯಾದ ಉಮೇಶ, ಕೆ.ಮಂಜಪ್ಪ, ಮಹೇಶ ನಾಯ್ಕ, ಆನಂದ, ಪ್ರವೀಣಕುಮಾರ, ಡಿ.ಎನ್.ದೇವರಾಜ, ಇ.ಎಸ್.ಪ್ರಶಾಂತರನ್ನು ಒಳಗೊಂಡ ತಂಡ ರಚಿಸಿ, ಮನಗಳ್ಳರ ಪತ್ತೆಗೆ ತಂಡ ತೊಡಗಿತ್ತು. ಚಿಕ್ಕಬೆನ್ನೂರು ಗ್ರಾಮದ ರಾಮ ಅಲಿಯಾಸ್ ಬುಡ್ಡರಾಮ ಹಾಗೂ ಮಾವಿನಕಟ್ಟೆ ಗ್ರಾಮದ ಟಿ.ಸಂತೋಷರನ್ನು ತಂಡವು ಪತ್ತೆ ಮಾಡಿ, ವಿಚಾರಣೆಗೆ ಒಳಪಡಿಸಿದಾಗ ತಾವಿಬ್ಬರು ಧನಂಜಯ, ಮುಖೇಶ ಎಂಬ ಮತ್ತಿಬ್ಬರಜೊತೆಗೆ ಸೇರಿಕೊಂಡು, ನಾಲ್ವರೂ ಜುಲೈ, ಆಗಸ್ಟ್‌ನಲ್ಲಿ ನ್ಯಾಮತಿ ಪಟ್ಟಣ, ಸುರಹೊನ್ನೆ, ಗಂಜೇನಹಳ್ಳಿ, ಚಟ್ನಹಳ್ಳಿಯಲ್ಲಿ ಮನೆಗಳ್ಳತನ ಮಾಡಿದ್ದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಬಂಧಿತ ರಾಮ ಅಲಿಯಾಸ್ ಬುಡ್ಡ ರಾಮನ ಮೇಲೆ ಚಿತ್ರದುರ್ಗ ಜಿಲ್ಲೆ ಚಿಕ್ಕಜಾಜೂರು, ಹೊಳಲ್ಕೆರೆ, ಚಿತ್ರದುರ್ಗ ಗ್ರಾಮಾಂತರ ಠಾಣೆ, ಶಿವಮೊಗ್ಗ ಜಿಲ್ಲೆ ಆನವಟ್ಟಿ, ಭದ್ರಾವತಿ ಪಟ್ಟಣ, ದಾವಣಗೆರೆ ಗ್ರಾಮಾಂತರ, ಹದಡಿ, ಹರಿಹರ ಗ್ರಾಮಾಂತರ, ಮಲೆಬೆನ್ನೂರು, ಮಾಯಕೊಂಡ, ಚನ್ನಗಿರಿ, ಸಂತೇಬೆನ್ನೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಕಳ್ಳತನ ಪ್ರಕರಣ ದಾಖವಾಗಿವೆ.ಬಂಧಿತರಿಂದ 8 ಮನೆಗಳ್ಳತನ ಪ್ರಕರಣ ಪತ್ತೆ ಮಾಡಿ, 6.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತು ಮಾಡಲಾಗಿದೆ. ಬಂಧಿದ ರಾಮ ಮತ್ತು ಸಂತೋಷರನ್ನು ನ್ಯಾಯಾಂಗ ಬಂಧನಕ್ಕೊಪಿಸಿದ್ದು, ತಲೆ ಮರೆಸಿಕೊಂಡ ಉಳಿದಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ನ್ಯಾಮತಿ ತಾಲೂಕಿನ ಜನತೆ ಸರಣಿ ಮನೆಗಳ್ಳತನದಿಂದ ಭೀಯ ಭೀತರಾಗಿದ್ದು, ಪೊಲೀಸರು ಸರಣಿ ಮನೆಗಳ್ಳತನ ಪ್ರಕರಣಗಳಲ್ಲಿ ಯಾವುದೇ ಸಿಸಿ ಟಿವಿ ಸೇರಿದಂತೆ ಯಾವುದೇ ಸಾಕ್ಷಿಗಳು ಸಿಗದಿದ್ದರೂ ಪೊಲೀಸರ ಚಾಣಾಕ್ಷತೆ, ಸೂಕ್ಷ್ಮತೆಯಿಂದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಇದರೊಂದಿಗೆ ನ್ಯಾಮತಿ ತಾಲೂಕಿನ ಜನತೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ