ವಾಹನಗಳಲ್ಲಿ ಬೇಕಾಬಿಟ್ಟಿ ಸ್ಟಿಕರ್ ಅಂಟಿಸಿದರೆ ಆರ್‌ಟಿಒ ಕ್ರಮ
ಬೆಂಗಳೂರು.ಸೆ. ೪- ವಾಹನಗಳಲ್ಲಿ ಬೇಕಾಬಿಟ್ಟಿ ಸ್ಟಿಕರ್ ಅಂಟಿಸಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಆರ್‌ಟಿಒ ಎಚ್ಚರಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಬಂಧನದ ನಂತರ ಅವರ ಅಭಿಮಾನಿಗಳು ಅಂಧಾಭಿಮಾನ ಮಿತಿ ಮೀರಿದೆ. ವಾಹನಗಳ ಮೇಲೆ ದರ್ಶನ್ ಕೈದಿ ನಂಬರ್ ಸೇರಿದಂತೆ ತರಹೇವಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಅಭಿಮಾನ ಮೆರೆಯುತ್ತಿದ್ದಾರೆ.
ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಅಭಿಮಾನಿಗಳು ವಾಹನಗಳ ಮೇಲೆ ತರಹೇವಾರಿ ಬರಹ ಬರೆದು ಅಂಧಾಭಿಮಾನ ಮೆರೆಯುತ್ತಿದ್ದಾರೆ. ದರ್ಶನ್‌ಗೆ ನೀಡಿರುವ ಕೈದಿ ಸಂಖ್ಯೆ, ಸೇರಿದಂತೆ ವಾಹನಗಳ ಮೇಲೆ ಪ್ರಚೋದನಕಾರಿ, ಬೇರೆ ನಟರ ಅಭಿಮಾನಿಗಳಿಗೆ ಟಾಂಗ್ ಕೊಡುವಂತ ಬರಹಗಳ ಸ್ಟಿಕರ್ ಅಳವಡಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ನಿಗಾ ವಹಿಸಿರುವ ಪೊಲೀಸರು ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು,ಡಿಬಾಸ್ ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಆರ್‌ಟಿಒ ಇಲಾಖೆಗಳಿಗೆ ನಿರ್ದೇಶನ ಕೊಟ್ಟಿದೆ. ಅದರ ಅನ್ವಯವೇ ಅಧಿಕಾರಿಗಳು ಕೇಸು ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್‌ಡಿಒ ಇಲಾಖೆ ಮಾಡಿದೆ. ಕಳೆದ ೩ ವರ್ಷಗಳಲ್ಲಿ ಈ ಸಂಬಂಧ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು. ಇನ್ನು ಮುಂದೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್ ಕೊಡೋ ಬರಹಗಳನ್ನ ತೆಗೆದು ಹಾಕಿ, ಇಲ್ಲ ನಮ್ಮ ಕಠಿಣ ಕ್ರಮ ಗ್ಯಾರಂಟಿ ಅಂತಿದ್ದಾರೆ ಎಂದು ಎಚ್ಚರಿಸಿದ್ದಾರೆ.