ಸೆ.೨೩ ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್ ಮುಕ್ತಾಯ
ಶಿವಮೊಗ್ಗ. ಸೆ. ೪- ಶಿವಮೊಗ್ಗ ವಿಮಾನ ನಿಲ್ದಾಣದ ಹಾರಾಟ ಲೈಸೆನ್ಸ್ ಸೆ.೨೩ಕ್ಕೆ ಮುಕ್ತಾಯಗೊಳ್ಳಲಿದೆ.
ಇಲ್ಲಿನ ಸೋಗಾನೆಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಒಂದು ವರ್ಷದ ಅವಧಿಗೆ ಪರವಾನಗಿ ನೀಡಿತ್ತು.
ಇದೀಗ ಸೆ.೨೩ಕ್ಕೆ ಪರವಾನಗಿ ಮುಕ್ತಾಯಗೊಳ್ಳಲಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಹಿಂದಿನಂತೆ ಒಂದು ವರ್ಷದ ಅವಧಿಗೆ ಪರವಾನಗಿ ಮುಂದುವರೆಸದೇ ಕೇವಲ ಒಂದು ತಿಂಗಳಿಗೆ ಮಾತ್ರ ವಿಸ್ತಿರಿಸಿದೆ. ಕೊಟ್ಟಿರುವ ಅವಧಿಯೂ ಮುಕ್ತಾಯಗೊಂಡರೆ ಮಲೆನಾಡಿನ ಲೋಹದ ಹಕ್ಕಿಗಳ ಹಾರಾಟದ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.
ಪರವಾನಗಿ ನೀಡುವಾಗ ಡಿಜಿಸಿಎ ಷರತ್ತು ವಿಧಿಸಿತ್ತು. ಆದರೆ ಕೆಎಸ್‌ಐಐಡಿಸಿ ಸಂಪೂರ್ಣವಾಗಿ ಪೂರೈಸಿಲ್ಲ ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಮಾನದಂಡಗಳ ಅಳವಡಿಕೆಯಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ)ವಿಫಲವಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟಕ್ಕೆ ಪರವಾನಗಿ ನೀಡಲು ಡಿಜಿಸಿಎ ಆಸಕ್ತಿ ತೋರಿಸುತ್ತಿಲ್ಲ. ಮುಂದೆ ಈ ಸಮಸ್ಯೆಗೆ ಏನು ಎಂಬು ಮರೀಚಿಕೆಯಾಗಿದೆ.
ಕೇವಲ ಒಂದು ತಿಂಗಳಿಗೆ ಮಾತ್ರ ಪರವಾನಗಿಯನ್ನ ನವೀಕರಣ ಮಾಡಿರುವುದು ನಿಜ. ಮೂಲಸೌಕರ್ಯಗಳನ್ನ ಒದಗಿಸಲು ಮೂಲಸೌಕರ್ಯ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಯನ್ನ ಭೇಟಿಯಾಗಿ ಮಾತಕತೆ ನಡೆಸಿದ್ದೇನೆ. ಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.