ಎಲ್ಲರೂ ಸೇರಿ ಹಬ್ಬದ ರೀತಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಳ್ಳಿರಿ : ಮಧು ಬಂಗಾರಪ್ಪ
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ.೪:ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರಜಾಪ್ರಭುತ್ವ ದಲ್ಲಿರುವ ಎಲ್ಲರೂ ಸೇರಿ ಹೆಮ್ಮೆಯಿಂದ ಹಬ್ಬದ ರೀತಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಕರೆ ನೀಡಿದರು. ಶಂಕರ ಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ ಸೆ.15 ರಂದು ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು. ಜಿಲ್ಲೆಗೆ ಮಾರ್ಗನಕ್ಷೆ ನೀಡಲಾಗಿದ್ದು ಅದರಂತೆ ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗ ತಾಲ್ಲೀಕಿನ ಮಡಿಕೆಚೀಲೂರುವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. ಮಾನವ ಸರಪಳಿ ನಿರ್ಮಿಸಲು ೫೦ ಸಾವಿರ ಜನರ ಅಗತ್ಯವಿದ್ದು ವಿದ್ಯಾರ್ಥಿಗಳನ್ನು ಸಹ ತೊಡಗಿಸಿಕೊಳ್ಳಲಾಗುವುದು.ತಹಶೀಲ್ದಾರ್,   ಇಓ ಸಿಡಿಪಿಒ ಗಳು ಸೇರಿದಂತೆ ಎಲ್ಲ ಇಲಾಖೆಯವರನ್ನು ಒಳಗೊಂಡು ಯೋಜಿಸಿ,ಸಂಘ ಸಂಸ್ಥೆಗಳ ಸಭೆ ಕರೆದು ಸಹಯೋಗ ಕೋರಲಾಗುವುದು ಎಂದರು.ಜಿ.ಪಂ. ಸಿಇಓ ಎನ್.ಹೇಮಂತ್ ಮಾತನಾಡಿ, ಎಸ್ ಎ ಜಿ‌ ಗುಂಪಿನ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ವಿಶೇಷ ಗ್ರಾಮ ಸಭೆ ಮಾಡಿ ಜನರನ್ನು ಕರೆ ತರಲಾಗುವುದು ಎಂದರು.