ಶಿಕ್ಷಣ ತಜ್ಞ ಪ್ರೊ. ಅನಂತಾಚಾರ್ ಜನ್ಮದಿನ
ಬೆಂಗಳೂರು; ಸೆ. ೪ ಆಧುನಿಕ ಭಾರತದ ಅಬ್ರಹಾಂ ಲಿಂಕನ್, ಕಾಯಕಯೋಗಿ, ಶ್ರೇಷ್ಠ ಶಿಕ್ಷಣ ತಜ್ಞ, ಮಾನವತಾವಾದಿ ಪ್ರೊ.ಎನ್.ಅನಂತಚಾರ್ ಜನ್ಮ ದಿನಾಚರಣೆ, ಸಂಸ್ಥಾಪಕರ ದಿನ, ಜೊತೆಗೆ ಶಿಕ್ಷಕರ ದಿನ. ಈ ತ್ರಿವಳಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ ನಗರದ ಪ್ರತಿಷ್ಠಿತ ಎ.ಪಿ.ಎಸ್ ಶಿಕ್ಷಣ ಸಂಸ್ಥೆ. ಪ್ರೊ.ಎನ್.ಅನಂತಚಾರ್ ಜನ್ಮದಿನ, ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನದಂದೇ ಬಂದಿರುವುದು ವಿಶೇಷವಾಗಿದೆ. ಈ ದಿನವನ್ನು ಸಂಸ್ಥಾಪಕರ ದಿನವನ್ನಾಗಿಯೂ ಆಚರಿಸಲಾಗುತ್ತಿದೆ.
“ಬುದ್ಧಿಬರಬೇಕಾದರೆ ದೊಡ್ಡವರ ಸುದ್ದಿ ಕೇಳಿರಬೇಕೆಂಬ ದಾಸವಾಣಿಗೆ ಅನ್ವರ್ಥರಾಗಿದ್ದಾರೆ ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಎನ್.ಅನಂತಚಾರ್. ಅವರು ಮಾತೃಭಾಷಾಪ್ರೇಮಿ, ನುಡಿದಂತೆ ನಡೆದ ಕಾಯಕಯೋಗಿ, ಧರ್ಮನಿರಪೇಕ್ಷತೆಯುಳ್ಳ, ಸರಳ, ಸಜ್ಜನಿಕೆಯ ಸಕಾರ ಮೂರ್ತಿ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಸ್ವಾತಂತ್ರ್ಯ ದೊರಕಿದ ೧೨ ವರ್ಷಗಳ ಹಿಂದೆಯೆ ಬಹು ದೂರದೃಷ್ಟಿಯಿಂದ ೧೯೩೫ರಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಇವರು ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ಅಸಮಾನ್ಯ ಸಾಧನೆಗೈದ ಆದರ್ಶ ಪುರುಷ.
ಪ್ರೊ.ಎನ್.ಅನಂತಚಾರ್ ೧೯೧೦ರ ಸೆಪ್ಟೆಂಬರ್ ೫ರಂದು ತುಮಕೂರು ಜಿಲ್ಲೆಯ ನ್ಯಾಮಗೊಂಡ್ಲುನಲ್ಲಿ ಎಂ.ನರಸಿಂಹ ಮೂರ್ತಿ ಆಚಾರ್ ಹಾಗೂ ತುಲಸಮ್ಮ ಅವರ ಪುತ್ರರಾಗಿ ಜನಿಸಿದರು. ಸ್ವಾತಂತ್ರಪೂರ್ವದಲ್ಲೇ ಮೈಸೂರು ವಿವಿಯಿಂದ ಬಿ.ಎ ಹಾಗೂ ಎಂ.ಎ ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕ್ರೀಡಾಸಕ್ತಿ ಹೊಂದಿದ್ದ ಅವರು ಕ್ರಿಕೆಟ್ ಆಟಗಾರರು. ಶಿಕ್ಷಣದ ಜೊತೆಗೆ ಕ್ರೀಡಾ ಪ್ರೇಮಿಯೂ ಸಹ ಆಗಿದ್ದರು. ಮಹಾಪುರುಷರ ಸಾಧನೆಯಲ್ಲಿ ಅವರ ಸಹಧರ್ಮೀಯದ್ದು ಸಿಂಹಪಾಲಿದೆ.
ನರ್ಮದಾಬಾಯಿ ಅನಂತಚಾರ್ ಏಳು ಬೀಳುಗಳನ್ನು ಕಂಡವರು. ಪತಿಗೆ ಹೆಗಲಿಗೆ ಹೆಗಲುಕೊಟ್ಟು ಸಂಸ್ಥೆಯ ಶ್ರೇಯೊಭಿವೃದ್ದಿಗೆ ಶ್ರಮಿಸಿರುವ ಧೀಮಂತ ಮಹಿಳೆ. ಪತಿಯ ಕೆಲಸಕಾರ್ಯಗಳಿಗೆ ಸದಾಕಾಲ ಉತ್ತೇಜನ ನೀಡುತ್ತಾ ಅಧ್ಯಾಪಕರುಗಳಿಗೆ ಸಂಬಳ ನೀಡಲು ಹಣವಿಲ್ಲದಿದ್ದಾಗ ತಮ್ಮ ವಡವೆ ಅಡವಿಟ್ಟ ಮಹಾತ್ಯಾಗಮಯಿ.