ರಾಜ್ಯಪಾಲರ ವಿರುದ್ದ ಕಪ್ಪು ಬಾವುಟ ಪ್ರದರ್ಶನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ. ೪- ನಾಡಿದ್ದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಘಟಿಕೋತ್ಸವ ಸಮಾರಂಭಕ್ಕೆ ನಗರಕ್ಕೆ ಆಗಮಿಸುತ್ತಿರುವ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅಚರ ವಿರುದ್ದ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಕಪ್ಪು ಬಾವುಟ ಪ್ರದರ್ಶನ ನಡೆಸಲು ನಿರ್ಧರಿಸಿದೆ.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಒಕ್ಕೂಟದ ಮುಖಂಡರು. ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ, ಉಪ ಮುಖ್ಯ ಮಂತ್ರಿ, ಎರೆಡು ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಜೀವನ ನಡೆಸಿದ್ದಾರೆ.
ಇಂತಹ ವ್ಯಕ್ತಿಯು ಕರ್ನಾಟಕದಲ್ಲಿ ಉತ್ತಮ ಆಡಳಿತವನ್ನು ನೀಡುತ್ತಿರುವುದನ್ನು ಸಹಿಸದ ಬಿಜೆಪಿ. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರ ಸರ್ಕಾರವನ್ನು ಪದಚ್ಯುತಿಗೊಳಿಸುವ ಹುನ್ನಾರ ನಡೆಸಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರು ಅಧಿಕಾರಿಗಳ ಮೂಲಕ ವಿನಾಕಾರಣ ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೆ ಎಂಬುದನ್ನು ಬಿಂಬಿಸಲು ಹೊರಟಿದ್ದಾರೆ.
ವಕೀಲ ಅಬ್ರಾಹಂ ಅವರು ಬ್ಲಾಕ್ ಮೇಲರ್, ಆತನಿಗೆ ನ್ಯಾಯಾಲಯ ಸುಳ್ಳು ದೂರು ನೀಡಿದ್ದಕ್ಕೆ ದಂಡ ಹಾಕಿದೆ. ಅಂತಹ ವ್ಯಕ್ತಿಯ ದೂರಿಗೆ ರಾಜ್ಯಪಾಲರು ಮಾನ್ಯತೆ ನೀಡಿ ತಕ್ಷಣ ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಸರಿಯಲ್ಲ.
ಅದಕ್ಕಾಗಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಗೆ ಮಾರಕವಾಗಿ ನಡೆದು ಕೊಳ್ಳುತ್ತಿರುವ ರಾಜ್ಯಪಾಲರ ವಿರುದ್ದ ಆ.೬ ರಂದು ಮಧ್ಯಾಹ್ನ ವಿವಿಯ ಗೇಟ್ ಮುಂಭಾಗದಲ್ಲಿ ಕಪ್ಪು ಭಾವುಟ ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಿದೆಂದು ಹೇಳಿದರು.