ರಾಜೇಂದ್ರ ಶ್ರೀ ಜಯಂತಿ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.04:- ಜೆಎಸ್‍ಎಸ್ ಮಹಾವಿದ್ಯಾಪೀಠದ ಸಭಾಂಗಣದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗ¼ 109ನೇ ಜಯಂತಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್, 1988ರಲ್ಲಿ ಮೈಸೂರಿಗೆ ಉನ್ನತ ವ್ಯಾಸಂಗಕ್ಕಾಗಿ ಬಂದ ಜೆಎಸ್‍ಎಸ್ ಮೇನ್ ಬಿಲ್ಡಿಂಗ್‍ನಲ್ಲಿ ಉಚಿತ ಊಟ ವಸತಿ ವ್ಯವಸ್ಥೆಯನ್ನು ಈಗಿನ ಜಗದ್ಗುರು ಕಲ್ಪಿಸಿಕೊಟ್ಟಿದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ನಾಡಿನ ಹಿರಿಯ ವಿದ್ವಾಂಸರೆಲ್ಲ ಜೆಎಸ್‍ಎಸ್ ವಸತಿ ನಿಲಯದಲ್ಲಿದ್ದು ಅವರ ಬದುಕನ್ನು ರೂಪಿಸಿಕೊಂಡಿದ್ದಾರೆ. ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾದವರು. ಅಂದಿನ ಕಾಲಕ್ಕೆ ಅನ್ನ, ಅಕ್ಷರ, ಔಷಧಿಯನ್ನು ಜನಸಾಮಾನ್ಯರಿಗೆ ನೀಡುವುದರ ಮೂಲಕ ಕಲ್ಪವೃಕ್ಷವಾಗಿದ್ದವರು ರಾಜೇಂದ್ರ ಶ್ರೀಗಳು. ಅಂತಃಕರಣವುಳ್ಳವರಾಗಿದ್ದ ಶ್ರೀಗಳು ಸುತ್ತೂರು ಶ್ರೀಮಠದ ಕಳಸಪ್ರಾಯರಾಗಿ ಜಗತ್ತಿನಾದ್ಯಂತ ಕಾಯಕ, ದಾಸೋಹದ ಪರಂಪರೆ ಎತ್ತಿ ಹಿಡಿದವರಾಗಿದ್ದರು ಎಂದು ಹೇಳಿದರು.
ಲೆಕ್ಕ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಮಾತನಾಡಿ, ರಾಜೇಂದ್ರ ಶ್ರೀಗಳು ತ್ರಿವಿಧ ದಾಸೋಹ ಮೂರ್ತಿಗಳಾಗಿದ್ದರು. ಶಾಲಾ-ಕಾಲೇಜು ಸಂಘ ಸಂಸ್ಥೆಗಳನ್ನು ತೆರೆಯುವುದರ ಮೂಲಕ ಸಾರ್ವಜನಿಕರ ಬದುಕಿಗೆ ಆಶ್ರಯದಾತರಾಗಿದ್ದರು. ತಮ್ಮ ಕರ್ತವ್ಯಗಳನ್ನು ಶ್ರದ್ದಾಪೂರ್ವಕವಾಗಿ ನಿರ್ವಹಿಸುವುದೇ ಶ್ರೀಗಳವರಿಗೆ ನಾವು ತೋರುವ ಕೃತಜ್ಞತೆಯಾಗಿದೆ ಎಂದು ನುಡಿ ನಮನ ಸಲ್ಲಿಸಿದರು.
ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಮಠದ ಜಯರಾಜೇಂದ್ರ ಸ್ವಾಮಿ, ಕಾರ್ಯದರ್ಶಿಗಳಾದ ಎಸ್.ಪಿ.ಮಂಜುನಾಥ್, ಎಸ್.ಶಿವಕುಮಾರಸ್ವಾಮಿ, ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರುಗಳು, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ. ಸುರೀಂದರ್ ಸಿಂಗ್, ಜೆಎಸ್‍ಎಸ್ ಮಹಾವಿದ್ಯಾಪೀಠದ ಎಲ್ಲ ಉದ್ಯೋಗಿಗಳು ಇತರರು ಹಾಜರಿದ್ದರು.