ಚಾ.ಬೆಟ್ಟ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
ಸಂಜೆವಾಣಿ ನ್ಯೂಸ್
ಮೈಸೂರು: ಸೆ.04:- ಚಾಮುಂಡಿಬೆಟ್ಟ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮತ್ತಷ್ಟು ಆಕರ್ಷಕವನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚನೆಯಾದ ಬಳಿಕ ಇಂದು ಮೊದಲ ಸಭೆ ನಡೆದಿದೆ. ಈ ಹಿಂದೆ ಸಮಿತಿ ಇತ್ತು. ದೇವಸ್ಥಾನದ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ಸಮಿತಿಯೇ ನೋಡಿಕೊಳ್ಳುತ್ತಿತ್ತು. ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಸಲುವಾಗಿ ಮಹದೇಶ್ವರ ಬೆಟ್ಟ, ಹುಲಿಗೆಮ್ಮ ದೇವಸ್ಥಾನ, ಸವದತ್ತಿ ಎಲ್ಲಮ್ಮ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಪ್ರಾಧಿಕಾರಗಳಂತೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದರು.
ಬೆಟ್ಟದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಬೆಟ್ಟಕ್ಕೆ 24 ದೇವಾಲಯಗಳು ಸೇರಿವೆ. ಅವುಗಳ ಅಭಿವೃದ್ಧಿ ಜತೆಗೆ ಬೆಟ್ಟದ ಅಭಿವೃದ್ಧಿಯೂ ಆಗಬೇಕು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಪ್ರಸನ್ನ ಕೃಷ್ಣಸ್ವಾಮಿ ದೇಗುಲ, ಕೋಟೆ ಆಂಜನೇಯಸ್ವಾಮಿ ದೇಗುಲ, ಭುವನೇಶ್ವರಿ ಅಮ್ಮನವರ ದೇಗುಲ, ಶ್ವೇತವರಾಹ ಸ್ವಾಮಿ ದೇಗುಲ, ಗಾಯತ್ರಿ ಅಮ್ಮನವರ ದೇವಾಲಯಗಳ ಜೀರ್ಣೋದ್ಧಾರ ಮಾಡಲಾಗುವುದು. ಕಸವಿಲೇವಾರಿಗೆ ವಿದ್ಯುದೀಕರಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು.
ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ, ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗುವುದು. ಬೆಟ್ಟದಲ್ಲಿ ಕೆರೆಗಳು, ಮೆಟ್ಟಿಲುಗಳು, ನಂದಿ ಪ್ರತಿಮೆಯ ಅಭಿವೃದ್ಧಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಜಾರಿಗೆ ಅನುಮೋದನೆ ನೀಡಿದ್ದು, ಅಭಿವೃದ್ಧಿಗೆ ಬೇಕಾದ ಹೆಚ್ಚುವರಿ 60 ಕೋಟಿ ಹಣವನ್ನು ಪ್ರಾಧಿಕಾರದಿಂದ ಭರಿಸಲಾಗುತ್ತದೆ ಎಂದರು.
ಟಾಸ್ಕ್ ಪೋರ್ಸ್ ರಚನೆ:
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸಲು ಸಲುವಾಗಿ ಅಗತ್ಯ ಇರುವ ಕಡೆ ಸಿಸಿ ಟಿವಿಗಳನ್ನು ಸಿಎಸ್‍ಆರ್ ನಿಧಿಯಡಿ ಅಳವಡಿಸಲು ತಿಳಿಸಿದ್ದೇನೆ. ಜತೆಗೆ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ, ಭದ್ರತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಟಾಸ್ಕ್ ಪೋರ್ಸ್ ರಚನೆ ಮಾಡಲಾಗುವುದು. ದೇವಸ್ಥಾನ ಸಿಬ್ಬಂದಿಗೆ ವೈದ್ಯಕೀಯ ಸೌಲಭ್ಯ, ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಶುಕ್ರವಾರ ಸೇರಿದಂತೆ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ.
ಭಕ್ತರಿಗೆ ಹೀಗಾಗಲೇ ಮೂಲ ಸೌಲಭ್ಯ ಕಲ್ಪಿಸಲಾಗಿದ್ದು, ಕೆಲ ಅಭಿವೃದ್ಧಿ ಕೆಲಸಗಳು ಆಗಿವೆ. ಬಸ್ ನಿಲ್ದಾಣ, ಪಾರ್ಕಿಂಗ್, ಮಳಿಗೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ಪೂರ್ಣವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ 2018ರಲ್ಲಿ ಕಾಮಗಾರಿ ಆರಂಭವಾದರೂ ಪೂರ್ಣವಾಗಿಲ್ಲ. ಹೀಗಾಗಿ ಈ ಹಿಂದೆ ಕೈಗೊಂಡಿರುವ ಎಲ್ಲಾ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು.
ದೇವಸ್ಥಾನದ ಆದಾಯ ಹೆಚ್ಚಳ
ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಿಲ್ಲ. ದೇವಸ್ಥಾನದ ಖಾತೆಯಲ್ಲಿ 169 ಕೋಟಿ ಇದೆ. ಇದರಲ್ಲಿ ನಿಶ್ಚಿತ ಠೇವಣಿಯೇ 162 ಕೋಟಿಯಿದೆ. ಪ್ರತಿವರ್ಷವೂ ಖರ್ಚು ಕಳೆದು ಹೆಚ್ಚಿನ ಆದಾಯ ಉಳಿಯುತ್ತಿದೆ. 2023-24ರಲ್ಲಿ 49.64 ಕೋಟಿ ಆದಾಯ ಬಂದಿದ್ದು, 21 ಕೋಟಿ ಖರ್ಚಾಗಿದೆ. 28.18 ಕೋಟಿ ಆದಾಯವಾಗಿದೆ. ಜನವರಿಯಿಂದ ಜುಲೈವರೆಗೆ 17.4 ಕೋಟಿ ಆದಾಯ ಬಂದಿದ್ದು, 6.9 ಕೋಟಿ ಖರ್ಚಾಗಿದೆ. ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆದಾಯವೂ ಹೆಚ್ಚಾಗುತ್ತಿದೆ. ಬೆಟ್ಟದ ಅಭಿವೃದ್ಧಿಗೆ ಮುಂದಿನ ಐದು ವರ್ಷಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಿದ್ದೇನೆ. ಶಾಸಕರು, ಮಂತ್ರಿಗಳು ಸಲಹೆ ನೀಡಿದ್ದು ಅವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡಲಿದೆ ಎಂದರು.
ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಹರೀಶ್‍ಗೌಡ, ರವಿಶಂಕರ್, ಎಂಎಲ್ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಯತೀಂದ್ರ ಸಿದ್ದರಾಮಯ್ಯ, ಕೆ.ವಿವೇಕಾನಂದ, ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ನಗರ ಪೆÇಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.