ಮಾಜಿ ಸಚಿವ ಜನಾರ್ಧನರೆಡ್ಡಿ ಇಂದು ಸಂಜೆ ನಗರಕ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.03: ಅಕ್ರಮ, ಅವೈಜ್ಞಾನಿಕ ಗಣಿಗಾರಿಕೆ, ಸಾಗಾಣಿಕೆ, ಅಕ್ರಮ ಹಣ ಸಂಪಾದನೆ ಆರೋಪದಡಿ ಸಿಬಿಐನಿಂದ ಬಂಧಿತರಾಗಿ, ಕಳೆದ 13 ವರ್ಷಗಳ ನಂತರ ಬಳ್ಳಾರಿ ನಗರಕ್ಕೆ ನ್ಯಾಯಾಲಯದ ನಿರ್ಭಂದ ಇಲ್ಲದೆ ಇಂದು ಸಂಜೆ ಆಗಮಿಸುತ್ತಿದ್ದಾರೆ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ.
ಸಿಬಿಐ ಕಳೆದ 2011 ರ ಸೆ.5 ರಂದು ಬಂಧನ‌ ಮಾಡಿತ್ತು. ಐದು ವರ್ಷಗಳ ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ, ಸಾಕ್ಷಿ ನಾಶ ಮಾಡುತ್ತಾರೆಂದು  ಬಳ್ಳಾರಿಗೆ ಬರದಂತೆ ನಿರ್ಭಂದ ವಿಧಿಸಿತ್ತು.
ಈಗ ಆ ನಿರ್ಭಂದ ತೆರವು ಮಾಡಿದ ನಂತರ ಮೊದಲ ಬಾರಿಗೆ ಜನಾರ್ಧನರೆಡ್ಡಿ ಬಳ್ಳಾರಿಗೆ ಬರುತ್ತಿದ್ದಾರೆ‌.
ಗಂಗಾವತಿಯ ಶಾಸಕರಾಗಿರುವ ಅವರು ಇಂದು ಬೆಳಿಗ್ಗೆ ಅಲ್ಲಿನ ವಿವಿಧ ದೇವಾಲಯಗಳಿಗೆ ಪತ್ನಿ ಲಕ್ಷ್ಮೀ ಅರುಣ ಜೊತೆ ಪೂಜೆ ಸಲ್ಲಿಸಿ, ಸಂಜೆ ನಗರಕ್ಕೆ ಆಗಮಿಸಲಿದ್ದು. ಅವರ ಅಭಿಮಾನಿಗಳು ಅಲ್ಲಿಪುರದ ಮಹದೇವತಾತಾನ ಮಠದ ಬಳಿ ಸ್ವಾಗತಿಸಿ ನಂತರ ಸುದಾಕ್ರಾಸ್, ಮೋತಿ ಸರ್ಕಲ್, ರಾಯಲ್ ಸರ್ಕಲ್, ಮೂಲಕ ದುರ್ಗಮ್ಮ ಗುಡಿಗೆ ಕರೆತಂದು ನಂತರ ಅವರ ನಿವಾಸಕ್ಕೆ ಕರೆದುಕೊಂಡು ಹೋಗುತ್ತಾರಂತೆ.  ಅದಕ್ಕಾಗಿ ನಗರದ ಹಲವಡೆ ಬೆಂಬಲಿಗರು ಕೆಲ ಬ್ಯಾನರ್ ಗಳನ್ನು ಕಟ್ಟಿ ಸ್ವಾಗತಿಸುತ್ತಿದ್ದಾರೆ.