ನಗರಸಭಾ ಸದಸ್ಯ ಬಸವಣ್ಣ ಕಾಂಗ್ರೆಸ್ ಸೇರ್ಪಡೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.04:- ನಗರಸಭೆಯ 17ನೇ ವಾರ್ಡಿನ ಪಕ್ಷೇತರ ಸದಸ್ಯ ಬಸವಣ್ಣ ಇಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ನಗರಸಭೆ ಸದಸ್ಯ ಬಸವಣ್ಣ ಅವರನ್ನು ಪಕ್ಷದ ಶಲ್ಯ ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ನಗರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷದ ಹಿಡಿಯುವುದು ಖಚಿತವಾಗಿದೆ. ಈಗಾಗಲೇ ಎಸ್‍ಡಿಪಿಐ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ. ನಮ್ಮ ಪಕ್ಷದ ಎಂಪಿ ಮತ್ತು ಎಂಎಲ್‍ಎ ಸೇರಿ ಹೆಚ್ಚಿನ ಬಲ ನಮ್ಮದಾಗುತ್ತದೆ. ಹೀಗಾಗಿ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವ ಅತ್ಮವಿಶ್ವಾಸ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ಜಿಲ್ಲೆಯಲ್ಲಿ ನಮ್ಮದೇ ಪಕ್ಷ ಶಾಸಕರು, ಸಂಸದರು ಇದ್ದಾರೆ. ಇದರೊಟ್ಟಿಗೆ ನಗರಸಭೆ ಆಡಳಿತವು ಕಾಂಗ್ರೆಸ್ ಪಕ್ಷದ ತೆಕ್ಕೆ ಬಂದರೆ, ಜಿಲ್ಲಾ ಕೇಂದ್ರದ ನಗರಸಭೆ ಅಭಿವೃದ್ದಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷೇತರ ಅಭ್ಯರ್ಥಿ ಬಸವಣ್ಣ ಇವೆಲ್ಲವನ್ನು ಪರಿಗಣಿಸಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಚಿಕ್ಕಮಹದೇವ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ನಗರಸಭಾ ಸದಸ್ಯರಾದ ಆರ್.ಎಂ. ರಾಜಪ್ಪ, ಆರ್.ಪಿ. ನಂಜುಂಡಸ್ವಾಮಿ, ಮಾಜಿ ಸದಸ್ಯ ಬಸವರಾಜು, ಎಪಿಎಂಸಿ ಸದಸ್ಯ ಅಲೂರು ಪ್ರದೀಪ್, ಮುಖಂಡರಾದ ಎಸ್‍ಪಿಕೆ ಉಮೇಶ್, ಶಿವಮೂರ್ತಿ, ಶ್ರೀಕಾಂತ್, ಇತರರು ಇದ್ದರು.