ಹೊಲಿಗೆ ಯಂತ್ರದ ಸೌಲಭ್ಯ ಪಡೆಯಿರಿ
ಕೋಲಾರ,ಸೆ.೪- ಮಹಿಳೆಯರು ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲು, ಹೊಲಿಗೆ ಯಂತ್ರದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರ ಸವಲತ್ತನ್ನು ಪಡೆದು ಆರ್ಥಿಕವಾಗಿ ಪ್ರಗತಿ ಹೊಂದುವ ಚಿಂತನೆಯನ್ನು ಮಾಡಿಕೊಳ್ಳಬೇಕು ಎಂದು ಟವರ್ ವಿಷನ್ ಇಂಡಿಯಾ ಸಂಸ್ಥೆಯ ಸಿಮ್ರಾನ್ ಸಿಂಗ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಚೇರಿಯಲ್ಲಿ ತಾಸೆಡ್ ಟ್ರಸ್ಟ್ ಪ್ರಕ್ರಿಯೆ ಹಾಗೂ ಎಂಪವರಿಂಗ್ ರೂರಲ್ ವುಮನ್ ಥ್ರೂ ಸ್ಕಿಲ್ ಡೆವಲಪ್ಮೆಂಟ್ ಹಾಗೂ ಟವರ್ ವಿಷನ್ ಇಂಡಿಯಾ ಸಹಯೋಗದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿ, ತಾಲೂಕಿನ ಮುದುವಾಡಿ, ಕೋಡಿಕಣ್ಣೂರು, ಹಾಗೂ ನಗರದ ಬಿಡಿ ಕಾಲೋನಿಯ ಭಾಗಗಳಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರದ ತರಬೇತಿಯನ್ನು ನೀಡಲಾಗಿದೆ ಎಂದಲ್ಲದೆ, ಟವರ್ ವಿಷನ್ ಇಂಡಿಯಾ ಸಂಸ್ಥೆಯಿಂದ ೧೦೦ ಮಂದಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ ಎಂದರು.
ಟವರ್ ವಿಷನ್ ಇಂಡಿಯಾ ಸಂಸ್ಥೆಯ ಪುಷ್ಪವಲ್ಲಿ ಮಾತನಾಡಿ, ತಾಲೂಕಿನ ಮೂರು ಭಾಗಗಳಲ್ಲಿ ಸುಮಾರು ೪ ತಿಂಗಳ ಕಾಲ ಯಾವುದೇ ರೀತಿಯ ಭೇದ ಭಾವವನ್ನು ನೋಡದೆ ಟೈಲರಿಂಗ್ ಯಂತ್ರದ ತರಬೇತಿಯನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟವರ್ ವಿಷನ್ ಇಂಡಿಯಾ ಸಂಸ್ಥೆಯ ಹ್ಯಾರಿ, ನಿರ್ದೇಶಕ ಬ್ರದರ್ ಲಿಟಲ್ ದಾಸ್, ಪ್ರಕ್ರಿಯ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಮಹಿಳೆಯರು ಇದ್ದರು.