ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ : ವಾಸು ಆರೋಪ
ಕೋಲಾರ,ಸೆ.೪- ನಾನು ಎಸ್.ಎಫ್.ಐಗೆ ರಾಜಿನಾಮೆ ನೀಡಿ ಒಂದೂವರೆ ವರ್ಷ ಅದ ಮೇಲೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ವಾಸುದೇವರೆಡ್ಡಿ ಕೆ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನನ್ನು ಎಸ್.ಎಫ್.ಐ ನಿಂದ ತೆಗೆದು ಹಾಕಲಾಗಿದೆ ಎಂದು ಹೇಳಿರುತ್ತಾರೆ ಇದು ನನ್ನ ವರ್ಚಸ್ಸು ಕುಂದಿಸುವ ಷಡ್ಯಂತ್ರ ಆಗಿದೆ ಎಂದರು.
ಕಳೆದ ಹದಿನೈದು ವರ್ಷಗಳಿಂದ ಎಸ್.ಎಫ್.ಐ ಸಂಘಟನೆ ಕಟ್ಟಿದ ನಾನು ನನ್ನ ವಿದ್ಯಾಬ್ಯಾಸ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ದಿನಾಂಕ ೨೬-೦೩-೨೦೨೩ ರಂದು ಬೆಂಗಳೂರಿನಲ್ಲಿ ನಡೆದ ಎಸ್.ಎಫ್.ಐ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಾನೇ ಸ್ವತಃ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಆ ಸಭೆಯಲ್ಲಿ ಪದಾಧಿಕಾರಿಗಳಿಂದ ಅನುಮೋದನೆ ಮಾಡಿಸಿ ಲಿಖಿತ ರೂಪದಲ್ಲಿ ನಿರ್ಣಯ ಮಾಡಿಸಿ ಸಂಘಟನೆಯಿಂದ ಬಿಡುಗಡೆಯಾಗಿದ್ದೇನೆ. ಮತ್ತು ಅದೇ ಸಭೆಯಲ್ಲಿ ನನ್ನ ಸ್ಥಾನಕ್ಕೆ ಭೀಮನಗೌಡ ಎಂಬುವವರನ್ನು ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಿ ನಾನು ಸಂಘಟನೆಯ ಜವಾಬ್ದಾರಿಗಳಿಂದ ಸಂಪೂರ್ಣವಾಗಿ ಬಿಡುಗಡೆ ಆಗಿದ್ದೆನೆ. ವಕೀಲ ವೃತ್ತಿ ಮಾಡಿಕೊಂಡಿದ್ದೇನೆ ಎಂದರು.
ಆದರೆ ನಾನು ಸಂಘಟನೆಯಿಂದ ಬಿಡುಗಡೆ ಆಗಿ ಒಂದುವರೆ ವರ್ಷ ಕಳೆದ ಮೇಲೆ ಇದೀಗ ವಾಸುದೇವರೆಡ್ಡಿ ಯನ್ನು ಎಸ್.ಎಫ್.ಐ ನಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಪತ್ರಿಕಾಗೊಷ್ಠಿ ನಡೆಸಿರುವುದು ಷಡ್ಯಂತ್ರದ ಭಾಗವಾಗಿದೆ. ನಾನು ಎಸ್.ಎಫ್.ಐ ನಲ್ಲಿ ಯಾವ ಹುದ್ದೆಯಲ್ಲೂ ಇಲ್ಲ ಮತ್ತೆ ಅದು ಹೇಗೆ ತೆಗೆದು ಹಾಕಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ನಾನು ಎಸ್.ಎಫ್.ಐ.ನಿಂದ ಬಿಡುಗಡೆಯಾದ ನಂತರ ನನ್ನ ಸೈದ್ದಾಂತಿಕ ವಿಚಾರಗಳಿಗೆ ಹತ್ತಿರವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈಗ ನಡೆಯುತ್ತಿರುವ ಯುವಕಾಂಗ್ರೆಸ್ ಚುನಾವಣೆಯಲ್ಲಿ ಕೋಲಾರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.
ಇಡೀ ಜಿಲ್ಲೆಯ ಯುವಜನತೆಯಿಂದ ನನಗೆ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ನನ್ನ ರಾಜಕೀಯ ಜೀವನದ ಬೆಳವಣಿಗೆಯಿಂದ ಕಂಗಾಲಾಗಿರುವ ಕೆಲವರು ನನ್ನ ವರ್ಚಸ್ಸಿಗೆ ದಕ್ಕೆ ತರುವ ಷಡ್ಯಂತ್ರದ ಭಾಗವಾಗಿ ರಾಜಕೀಯ ಕಾರಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಯಾರು ನಂಬುವುದಿಲ್ಲ ಮತ್ತು ಕಳೆದ ೧೫ ವರ್ಷಗಳಿಂದ ನನ್ನ ಹೋರಾಟವನ್ನು ಕಂಡಿರುವ ಯುವಜನತೆಯ ಆಶಿರ್ವಾದದಿಂದ ನನ್ನ ಗೆಲುವನ್ನು ತಡೆಯಲು ಇದರಿಂದ ಸಾಧ್ಯವಿಲ್ಲ ಎಂದರು.