ಪುರಸಭೆ ಚುನಾವಣೆ: ಕಾಂಗ್ರೆಸ್‍ಗೆ ಬೆಂಬಲಿಸಿದ ಸ್ವಪಕ್ಷ ಸದಸ್ಯನ ಮನೆ ಮುಂದೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.04-ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಗುದ್ದಾಟ ತಾರಕಕ್ಕೇರಿದ್ದು ಆಪರೇಷನ್, ರಿವರ್ಸ್ ಆಪರೇಷನ್‍ನಲ್ಲಿ ಪಕ್ಷಗಳು ತೊಡಗಿವೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದ ಬಿಜೆಪಿಗೆ ಸ್ವಪಕ್ಷದವರ ಪಕ್ಷಾಂತರತಲೆ ನೋವು ತರಿಸಿದೆ.
ಸೆ.4 ರಂದು ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಬಿಜೆಪಿ ಸದಸ್ಯ ಕಾಂಗ್ರೆಸ್‍ಗೆ ಬೆಂಬಲ ಕೊಡುತ್ತಿರುವ ವಿಚಾರ ತಿಳಿದು ಮಾಜಿ ಶಾಸಕ ನಿರಂಜನಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಪುರಸಭಾ ಸದಸ್ಯಕಿರಣ್ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪುರಸಭೆಯ ನಾಲ್ವರು ಬಿಜೆಪಿ ಸದಸ್ಯರು ಕಾಂಗ್ರೆಸ್‍ಗೆ ಪಕ್ಷಾಂತರವಾಗಿರುವ ಮಾಹಿತಿ ತಿಳಿದು ಆಕ್ರೋಶಗೊಂಡ ಬಿಜೆಪಿಗರು ಸದಸ್ಯಕಿರಣ್ ಮನೆಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಕೃತಿದಹನ: ಬಿಜೆಪಿ ಚಿಹ್ನೆಯಡಿಗೆದ್ದಿದ್ದ ಕಿರಣ್, ಹೀನಾ ಕೌಸರ್, ರಾಣಿ ಲಕ್ಷ್ಮೀದೇವಿ ಹಾಗೂ ರಮೇಶ್ ಕೈ ಪಕ್ಷದಕಡೆ ಮುಖ ಮಾಡಿದ್ದುಕಿರಣ್ ಮತ್ತು ಹೀನಾ ಕೌಸರ್ ಪತಿ ನವೀದ್ ಅವರು ಕಾಂಗ್ರೆಸ್ ಸದಸ್ಯರಜೊತೆ ಪ್ರವಾಸಕ್ಕೆ ತೆರಳಿದ ಮಾಹಿತಿ ಪಡೆದ ಬಿಜೆಪಿ ಮುಖಂಡರು ಕಾಂಗ್ರೆಸ್‍ಗೆ ಪಕ್ಷಾಂತರವಾಗಿರುವ ನಾಲ್ಕು ಮಂದಿ ಸದಸ್ಯರು ಹಾಗೂ ಶಾಸಕ ಹೆಚ್ .ಎಂ.ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರ ಘೋಷಣೆಯನ್ನು ಆಕ್ರೋಶ ಹೊರಹಾಕಿ ಸದಸ್ಯರ ಪ್ರತಿಕೃತಿದಹನ ಮಾಡಿದ್ದಾರೆ.