ರೈತರ ಮಕ್ಕಳಿಗಾಗಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಸೆ.೪: ರೈತರ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಅಥಣಿ ಮತಕ್ಷೇತ್ರದಲ್ಲಿ ಕೃಷಿ ವಿದ್ಯಾಲಯವನ್ನು ಸ್ಥಾಪನೆ ಮಾಡುವ ಸಂಕಲ್ಪ ಹೊಂದಿದ್ದೇನೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಕೃಷಿ ಮಹಾವಿದ್ಯಾಲಯದ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದ ಹೊರವಲಯದ ಬೀಜೋತ್ಪನ್ನ ಕೇಂದ್ರದಲ್ಲಿ ಕೃಷಿ ಇಲಾಖೆಯ ನೂತನ ಗೋಧಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೃಷಿ ಇಲಾಖೆಯ ಪರಿಕರಗಳನ್ನು ದಾಸ್ತಾನು ಮಾಡಲು ನೂತನ ಗೋಧಾಮ ನಿರ್ಮಾಣಕ್ಕೆ ಸರ್ಕಾರದಿಂದ ೨೫ ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಇದರ ಕಾಮಗಾರಿ ಅನುಷ್ಠಾನವನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ.ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದ್ದಾಗಿ ನಿರ್ಮಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅಥಣಿ ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿ ಅಗತ್ಯವಿರುವ ಮೂರು ಸರ್ಕಾರಿ ಪ್ರೌಢಶಾಲೆಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇವುಗಳಿಂದ ಮಂಜೂರಾತಿ ಪಡೆದುಕೊಂಡರೆ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ತಾಲೂಕಿನ ಕೊಕಟನೂರದಲ್ಲಿ ಸ್ಥಾಪನೆಯಾಗಿರುವ ಪಶು ವೇದಿಕೆಯ ಮಹಾವಿದ್ಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಉದ್ಘಾಟನೆಗೊಳಿಸಿದ್ದಾರೆ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಂಡು ಪ್ರಸಕ್ತ ವರ್ಷದಲ್ಲಿ ತರಗತಿಗಳನ್ನು ಆರಂಭಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅರುಣ ಬಾಸಿಂಗೆ, ನರಸು ಬಡಕಂಬಿ, ಶ್ರೀಶೈಲ ನಾಯಿಕ, ಕೆ ಆರ್ ಐ ಡಿ ಎಲ್ ನ ಸಹಾಯಕ ಅಭಿಯಂತರ ಸದಾಶಿವಯ್ಯ, ತಾಲೂಕ ಸಹಾಯಕ ಕೃಷಿ ನಿರ್ದೇಶಕ ನಿಂಗನಗೌಡ ಬಿರಾದಾರ, ಸಹಾಯಕ ಅಭಿಯಂತರ ಸಂತೋಷ ಶೇಗುಣಸಿ, ಸಹಾಯಕ ಕೃಷಿ ಅಧಿಕಾರಿ ಗುಂಜಿಗಾವಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಿಂಗನಗೌಡ ಬಿರಾದಾರ ಸ್ವಾಗತಿಸಿದರು. ಸದಾಶಿವಯ್ಯ ವಂದಿಸಿದರು.