ಉಪಕಸುಬುಗಳಿಂದ ಅಧಿಕ ಆದಾಯ ಗಳಿಸಿ: ಡಾ.ರವೀಂದ್ರ ಬೆಳ್ಳಿ ಕರೆ
ಸಂಜೆವಾಣಿ ವಾರ್ತೆ.
ವಿಜಯಪುರ,ಸೆ.೪:ರೈತರು ಕೃಷಿ ಜೊತೆಗೆ ಉಪಕಸಬುಗಳನ್ನು ಮಾಡಿ ಹೆಚ್ಚಿನ ಆದಾಯ ಪಡೆಯಬೇಕು ಎಂದು ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಕರೆ ನೀಡಿದರು.
ಸೋಮವಾರ ಗಡಿ ಭಾಗದ ಜತ್ತ ತಾಲೂಕಿನ ಗಿರಿಗಾಂವ ಗ್ರಾಮದಲ್ಲಿ ಹಮ್ಮಿಕೊಂಡ ಕೃಷಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಕೇವಲ ಕೃಷಿ ಬೆಳೆಗಳನ್ನು ಬೆಳೆದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದರೆ ನಷ್ಟವನ್ನು ಅನುಭವಿಸುತ್ತಾರೆ. ಒಂದು ವೇಳೆ ಉಪಕಸಬುಗಳನ್ನು ಕೈಗೊಂಡಲ್ಲಿ, ಬೆಳೆಯಲ್ಲಿ ನಷ್ಟವಾದರೂ ಇನ್ನೊಂದರಿAದ ಸರಿಪಡಿಸಬಹುದಾಗಿದೆ ಎಂದರು.
ರೈತರು ವಿಶೇಷವಾಗಿ ರೈತ ಮಹಿಳೆಯರು ಹೈನುಗಾರಿಕೆ, ಆಡು-ಕುರಿ ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನುಸಾಕಾಣಿಕೆ ಮತ್ತು ರೇಷ್ಮೆ ಕೃಷಿಯಂತಹ ಲಾಭ ತರುವ ಉದ್ಯಮದಲ್ಲಿ ತೊಡಗಿಸಿಕೊಂಡು, ಅಧಿಕ ಆದಾಯ ಗಳಿಸಲು ಸಲಹೆ ನೀಡಿದರು.
ಯೋಗ ಶಿಕ್ಷಕ ಎಂ.ಪಿ. ದೊಡಮನಿ ಮಾತನಾಡಿ, ಮನುಷ್ಯನು ಇಂದಿನ ಆಧುನಿಕ ಜೀವನಶೈಲಿಯಿಂದ ಅನೇಕ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಆತ ಆರೋಗ್ಯವಾಗಿರಲು ಯೋಗ ಮತ್ತು ಸಾವಯವ ಆಹಾರ ಸೇವನೆ ಅತೀ ಅವಶ್ಯಕವಾಗಿದ್ದು, ರೈತರು ವಿಷಮುಕ್ತ ಕೃಷಿ ಮಾಡಬೇಕೆಂದರು.
ಕೃಷಿ ಸಲಹೆಗಾರ ಶಿವಾನಂದ ಹುಗ್ಗಿ ಅವರು, ಕಡಿಮೆ ಫಲವತ್ತಾದ ಜಮೀನಿನಲ್ಲಿ ಡ್ರಾಗನ್ ಹಣ್ಣಿನ ಬೇಸಾಯ ಕೈಗೊಂಡು ಅಧಿಕ ಲಾಭ ಪಡೆಯಲು ತಿಳಿಸಿದರು.
ಪ್ರವಚನ ಹೇಳಿದ ನಿಂಗಣ್ಣ ಶಾಸ್ತಿçಗಳು, ಪ್ರತಿಯೊಬ್ಬರು ಒಳ್ಳೆಯದನ್ನು ನೋಡುವುದು, ಒಳ್ಳೆಯದನ್ನು ಮಾತನಾಡುವುದು ಮತ್ತು ಪರರಿಗೆ ಉಪಕಾರವನ್ನು ಮಾಡಿ ಜೀವನ ಸಾರ್ಥಕಗೊಳಿಸಬೇಕೆಂದರು. ಸರಪಂಚರಾದ ಗೋಪಾಲ ಕುಂಬಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ದಯಾನಂದ ಗಿರಗಾಂವಕರ, ಮಲ್ಲಿಕಾರ್ಜುನ ಜಾಧವ, ವಿಠಲ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕೃಷಿ ಮಹಿಳೆಯರು ಹಾಗೂ ರೈತರು ಭಾಗವಹಿಸಿದ್ದರು.