ಎಡಮಂಗಲದ – ಮಾಲೆಂಗಿರಿ ಸಂಪರ್ಕದ ತಾತ್ಕಾಲಿಕ ಸೇತುವೆ ಕುಸಿತ
ಸುಳ್ಯ:ಎಡಮಂಗಲ – ಮಾಲೇಂಗ್ರಿ ಸಂಪರ್ಕಕ್ಕಾಗಿ ದೊಡ್ಡದಾದ ಮೋರಿ ಬಳಸಿ ಮಾಡಿದ ತಾತ್ಕಾಲಿಕ ಸೇತುವೆಯೂ ಕುಸಿತಗೊಂಡಿದೆ.
ಎಡಮಂಗಲ-ಮಾಲೇಂಗ್ರಿ ಸಂಪರ್ಕ ಸೇತುವೆ ಭಾರೀ ಮಳೆಗೆ ಕುಸಿತಗೊಂಡು ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಇದರ ಬದಲು ನಿಮಾರ್ಣವಾದ ತಾತ್ಕಾಲಿಕ ರಸ್ತೆ ಕಾಮಗಾರಿ ಪೂರ್ಣಗೊಂಡು ೨ ವಾರ ಆಗುವ ಮೊದಲೇ ಕುಸಿಯಲು ಆರಂಭವಾಗಿದೆ. ಆ. ೧೩ರಂದು ಸುರಿದ ಮಳೆಗೆ ಎಡಮಂಗಲ ಗ್ರಾಮದ ಮಾಲೆಂಗಿರಿ ಮುಖ್ಯ ರಸ್ತೆಯ ಸೇತುವೆಯ ಅಡಿಭಾಗದ ಕಲ್ಲು, ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಎಡಮಂಗಲ ಭಾಗಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆ ಬಳಿಕ ರಸ್ತೆಯ ಅಡ್ಡವಾಗಿ ಕೆಂಪು ಕಲ್ಲು ಕಟ್ಟಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ರೂ. ೧ ಲಕ್ಷ ಮತ್ತು ಶಾಶ್ವತ ಸೇತುವೆ ನಿರ್ಮಾಣಕ್ಕೆ ೫೦ ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ತಾತ್ಕಾಲಿಕ ಸೇತುವೆಯನ್ನು ದೊಡ್ಡದಾದ ಮೋರಿಯನ್ನು ಬಳಸಿಕೊಂಡು ಮಣ್ಣು ಮತ್ತು ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಯಿತು. ಆದರೆ ವಾಹನಗಳ ಸಂಚಾರ ಮತ್ತು ಮಳೆಯ ಪ್ರಮಾಣ ನಿರಂತರ ಇರುವ ಕಾರಣ ತಾತ್ಕಾಲಿಕ ಸೇತುವೆ ಸ್ವಲ್ಪ ಸ್ವಲ್ಪವೇ ಕುಸಿಯಲು ಆರಂಭಗೊಂಡಿದೆ. ಒಂದು ಬದಿಯ ಮೋರಿ ಹೆಚ್ಚು ಪ್ರಮಾಣದಲ್ಲಿ ಕುಸಿತಗೊಂಡಿದೆ. ತಾತ್ಕಾಲಿಕ ಸೇತುವೆ, ರಸ್ತೆಯು ಕುಸಿತಗೊಂಡರೆ ಎಡಮಂಗಲ – ಮಾಲೇಂಗ್ರಿ ಸಂಚಾರ ಸಂಪೂರ್ಣ ಬಂದ್ ಆಗುವ ಭಯ ಶುರು ಆಗಿದೆ.