ಮಾಲ್ಯ ಕಳೆದುಕೊಳ್ಳುತ್ತಿರುವ ರಾಜ್ಯಾಂಗ, ಹೊರತಾಗದ ಕಾರ್ಯಾಂಗ, ನ್ಯಾಯಾಂಗ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೪: ಭಾರತ ದೇಶದಲ್ಲಿ ರಾಜ್ಯಾಂಗ ವ್ಯವಸ್ಥೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಸಾಗಿದೆ. ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಇದಕ್ಕೆ ಹೊರತಾಗಿಲ್ಲ ಎಂದು ಎಂದು ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜಾಧ್ಯಕ್ಷ, ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ದೇಶದ ರಾಜಕಾರಣಿಗಳು ನೈಜ ರಾಜಕೀಯವನ್ನು ಮರೆ ಮಾಚಿ ಹಣ, ಅಧಿಕಾರದ ಮೋಹದಿಂದ ತಮ್ಮ ಇಡೀ ಕುಟುಂಬವನ್ನೇ ರಾಜಕಾರಣದ ಆಧಾರ ಸ್ತಂಭವನ್ನಾಗಿ ಮಾಡಲು ಹೊರಟಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಚುನಾವಣೆಗೆ ನಾಮಪತ್ರ ಸಲ್ಲಿಕೆ ನೀಡುವ ಸಂದರ್ಭದಲ್ಲಿ ನೀಡುವ ಪ್ರಮಾಣ ಪತ್ರದಲ್ಲಿ ಅವರ ಆಸ್ತಿಯ ಮೌಲ್ಯ ಮತ್ತು ಹಣಕಾಸಿನ ವಿವರ ನೋಡಿದರೆ ರಾಷ್ಟ್ರದ ಜನತೆ ದಂಗಾಗುವ ವಾತಾವರಣ ನೋಡಬಹುದಾಗಿದೆ ಎಂದಿದ್ದಾರೆ.ಇವತ್ತಿನ ದಿನಮಾನಗಳಲ್ಲಿ ನೈಜ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಇಲ್ಲ. ಜಾತಿಯ ವ್ಯಾಮೋಹದಿಂದ ತನಗಾಗಿ ಪ್ರಾಮಾಣಿಕತೆಯಿಂದ ದುಡಿದ ಪ್ರಮಾಣಿಕ ಕಾರ್ಯಕರ್ತರಿಂದ ಜನಪ್ರತಿನಿಧಿಗಳು ತಮ್ಮಿಂದ ಅಂತರ ಕಾಯ್ದುಕೊಳ್ಳುವ ಸ್ಥಿತಿ ನೋಡಬಹುದಾಗಿದೆ. ಇವತ್ತಿನ ರಾಜಕೀಯ ವಿಶ್ಲೇಷಣೆ ಕಳಚಿ ನಿಂತಿದೆ. ವ್ಯಕ್ತಿಗತ ವಿಶ್ಲೇಷಣೆ ಹೆಚ್ಚಾಗಿ ರಾಜಕಾರಣದ ವೈಭವೀಕರಣದಲ್ಲಿ ತನ್ನ ಕುಟುಂಬವನ್ನು ವಂಶಪಾರಂಪರ್ಯಕ್ಕೆ ಭದ್ರ ಬುನಾದಿ ಹಾಕುವತ್ತಾ ಸಾಗಿದೆ. ರಾಜಕೀಯ ವಿಶ್ಲೇಷಣೆಕಾರರು ಕಿವಿಯಿದ್ದು ಕಿವುಡರಾಗಿ, ಕಣ್ಣಿದ್ದು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಯಾವುದೇ ಅಭಿವೃದ್ದಿಯ ಶ್ರೇಷ್ಠತೆ ಬಗ್ಗೆ ವಿಶ್ಲೇಷಣೆ ನಡೆಯದಿರುವುದು ಸಾಂಸ್ಕøತಿಕ ರಂಗ, ಸಾಮಾಜಿಕ ಮೌಲ್ಯವನ್ನು ಅಧಪತನಕ್ಕೆ ಸಾಕ್ಷಿಯಾಗಿದೆ. ರಾಜಕೀಯ ನೇತಾರರು 100 ಎಕರೆಯಿಂದ 1 ಸಾವಿರ ಎಕರೆವರೆಗೂ ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸುವ ಭರಾಟೆಯಲ್ಲಿ ಸಾಗಿದ್ಧಾರೆ. ಸರ್ಕಾರಿ ವ್ಯಾಪ್ತಿಯಲ್ಲಿನ ಶಾಲೆಗಳು, ಆಸ್ಪತ್ರೆಗಳು ಸೇರಿದಂತೆ ಇತರೆ ಇಲಾಖೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ಕೈಚಲ್ಲಿ ಕುಳಿತಿದ್ದಾರೆ ಎಂದಿದ್ದಾರೆ.ಉಳ್ಳವರದ್ದೇ ಶಿವಾಲಯ ಎನ್ನುವ ಹಾಗೆ, ದಾವಣಗೆರೆ ಜಿಲ್ಲೆಯ ರಾಜಕಾರಣಿಗಳು ಕಣ್ಣಿಗೆ ಕಾಣುವಷ್ಟು ಎತ್ತರಕ್ಕೆ ಮತ್ತು ದೂರಕ್ಕೆ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಪ್ರಜ್ಞಾವಂತ ಮತದಾರರ ಮಕ್ಕಳಿಗೆ ಶಿಕ್ಷಣ ನೀಡುವ ನೆಪದಲ್ಲಿ ಶುಲ್ಕ ಎನ್ನುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಗಲು ದರೋಡೆ ಮಾಡುತ್ತಿರುವುದು ಸಾಗುತ್ತಲೇ ಇದೆ. ಬೇಲಿಯೇ ಎದ್ದು ಹೊಲ ಮೇಯುವ ಹಾಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಲವು ಭ್ರಷ್ಠ ಅಧಿಕಾರಿಗಳು ಕೆಳ ವರ್ಗದ ಅಧಿಕಾರಿಗಳನ್ನು ಹಿಂಸಿಸಿ ನಾವು ಯಾವುದೇ ವಿಚಾರದಲ್ಲಿ ಕಡಿಮೆ ಇಲ್ಲ ಎನ್ನುವಂತೆ ಆಸ್ತಿಯನ್ನು ಬೇನಾಮಿ ಹೆಸರಲ್ಲಿ ಖರೀದಿ ಮಾಡುತ್ತಿರುವುದನ್ನು ನೋಡಬಹುದಾಗಿದೆ ಎಂದು ತಿಳಿಸಿದ್ದಾರೆ.ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಂಘರ್ಷ ದಿನೇದಿನೇ ತೀವ್ರಗೊಳ್ಳುತ್ತಿದೆ. ರಾಜಕೀಯ ಎನ್ನುವ ಕೆಸರೆರಚಾಟದಲ್ಲಿ ನಾವುಗಳೇ ಹೆಚ್ಚು ಎಂದು ಬಿಂಬಿಸಿಕೊಳ್ಳುವ ಇಂದಿನ ನಾಯಕರು ಪಕ್ಷದ ಸೈದ್ದಾಂತಿಕ ಮೌಲ್ಯವನ್ನು ಗಾಳಿಗೆ ತೂರಿರುತ್ತಾರೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳನ್ನು ಖಂಡಿಸುವ ಹೋರಾಟಗಾರರು ಮರೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.ದಿನ ಕಳೆದಂತೆ ಈ ಅವ್ಯವಸ್ಥೆಯ ವಿರುದ್ದಗಾಗಿ ಜನತೆ ದಂಗೆ ಏಳುವ ಕಾಲ ದೂರವಿಲ್ಲ. ಇನ್ನಾದರೂ ರಾಜಕಾರಣಿಗಳು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಗಮನಹರಿಸಿ, ಮುಖ್ಯವಾಗಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಅಭಿವೃದ್ದಿ ಪಡಿಸಬೇಕು. ಕಡ್ಡಾಯವಾಗಿ ಎಲ್ಲಾ ಜನಪ್ರತಿನಿಧಿಗಳು, ರಾಜಕಾರಣಿಗಳು, ಎಲ್ಲಾ ವಲಯದ ಸರ್ಕಾರಿ ನೌಕರರು ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜಿನ ಪ್ರವೇಶ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.ಇಂದಿನ ದಿನಮಾನಗಳಲ್ಲಿ ಆರೋಗ್ಯ ಕ್ಷೇತ್ರ ವ್ಯಾಪಾರಿಕರಣ ಆಗಿರುವ ಕಾರಣ ಅಗತ್ಯ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಜನಸಾಮಾನ್ಯರ ಆರೋಗ್ಯ ದೃಷ್ಠಿಯಿಂದ ಮೇಲ್ದರ್ಜೆಗೇರಿಸಿ ಅಗತ್ಯವಿರುವ ಎಲ್ಲಾ ಔಷದೋಪಚಾರಗಳನ್ನು ಉಚಿತವಾಗಿ ನೀಡಲು ಮುಂದಾಗಬೇಕು ಎಂದು ಹೆಚ್.ಜಿ.ಉಮೇಶ್ ಒತ್ತಾಯಿಸಿದ್ದಾರೆ.