ಚರಿತ್ರೆ ಅಭಿಮಾನಕ್ಕೆ ಕಾರಣವಾಗಬೇಕು ಹೊರತು ಅಹಂಕಾರಕಲ್ಲ – ಡಾ. ಬಿಳಿಮಲೆ
ಸುಳ್ಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ-’ಅಮರ ಸುಳ್ಯ ಸಂಗ್ರಾಮ ೧೮೩೭
ಸುಳ್ಯ:ಪುಸ್ತಕಗಳು ಚರಿತ್ರೆಯ ಸಂಕೀರ್ಣ ಬೆಳವಣಿಗೆಗಳನ್ನು ಸರಳಗೊಳಿಸಿ ನೋಡಬಾರದು. ಅದರ ಆಳಕ್ಕೆ ಇಳಿದು ಅದರ ಸಾರವನ್ನು ಗ್ರಹಿಸಬೇಕು. ಚರಿತ್ರೆಗಳು ಅಭಿಮಾನಕ್ಕೆ ಕಾರಣವಾಗಬೇಕೆ ವಿನಹ ಅಹಂಕಾರಕ್ಕೆ ಕಾರಣವಾಗಬಾರದು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಸುಳ್ಯ ನೆಹರೂ ಸ್ಮಾರಕ ಕಾಲೇಜು, ಹಂಪಿ ವಿಶ್ವವಿದ್ಯಾನಿಲಯ ಪ್ರಸಾರಾಂಗ ವಿಭಾಗ ಮತ್ತು ಬಂಟಮಲೆ ಅಕಾಡೆಮಿಯ ಆಶ್ರಯದಲ್ಲಿ ಸೋಮವಾರ ಸುಳ್ಯದ ನೆಹರು ಸ್ಮಾರಕ ಕಾಲೇಜಿನಲ್ಲಿ ನಡೆದ ಅಮರ ಸುಳ್ಯ ಸಂಗ್ರಾಮ- ೧೮೩೭ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಕೆಲವು ವರ್ಷಗಳ ಹಿಂದೆ ಕೇಂದ್ರ ಸರಕಾರ ಮುನ್ನಲೆಗೆ ಬಾರದೆ ಅವಜ್ಞೆಗೆ ಒಳಗಾಗಿರುವ ಸ್ವಾತ್ರಂತ್ರ್ಯ ಹೋರಾಟಗಾರರನ್ನು ನೆನಪಿಸುವ ದೃಷ್ಠಿಯಿಂದ ಯೋಜನೆಯೊಂದನ್ನು ದೇಶಾದ್ಯಂತ ಕೈಗೆತ್ತಿಗೊಂಡಿತು. ಇದರಲ್ಲಿ ೭೦೦೦ ರಷ್ಟು ಹೆಸರುಗಳನ್ನು ಬಂದಿದ್ದು ೨೫೨ ಹೆಸರುಗಳನ್ನು ಅಂತಿಮಗೊಳಿಸಲಾಯಿತು. ವಿಪರ್ಯಾಸವೆಂದರೆ ಈ ಹೆಸರುಗಳಲ್ಲಿ ಅಮರ ಕ್ರಾಂತಿ ಹೋರಾಟಗಾರರ ಹೆಸರುಗಳಾಗಾಗಲೀ, ಕಾರ್ನಾಡ ಸದಾಶಿವ ರಾಯರ ಹೆಸರಾಗಲೀ ಇರಲಿಲ್ಲ. ಇದು ಇಂದಿನ ತಲೆಮಾರಿನ ಸಂಶೋಧನಾ ಮಾನಸಿಕತೆಗೆ ಸಾಕ್ಷಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಅಮರ ಕ್ರಾಂತಿ ಹೋರಾಟ ದಂತ ಅನೇಕ ಸಂಗ್ರಾಮಗಳು ಇತಿಹಾಸದಲ್ಲಿ ದಾಖಲಾಗಿಲ್ಲ. ಇಂಥ ಹೋರಾಟಗಳನ್ನು ಜಗಳ , ದರೋಡೆ ಎಂದು ಕಡೆಗಣಿಸಲಾಗಿತ್ತು . ಆದರೆ ಇವೆಲ್ಲವೂ ಆತ್ಮಾಭಿಮಾನದ ಸಂಗತಿಗಳು. ಇಂಥಹ ವಿಚಾರ ಸಂಕಿರಣದ ಮೂಲಕ ಇಂಥ ಹೋರಾಟಗಳು ಮುಖ್ಯ ಇತಿಹಾಸಗಳನ್ನು ಗುರುತಿಸಲ್ಪಟ್ಟು ಭವಿಷ್ಯದ ತೀರ್ಮಾನಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಮ್ಮ ಹೋರಾಟಗಾರರನ್ನೇ ನಾವು ಕಡೆಗಣಿಸುತ್ತಿರುವುದು ವಿಪರ್ಯಸ. ಹೋರಾಟಗಾರರು ಮಾತ್ರವಲ್ಲ ಅನೇಕ ಸಾಧಕರು ಕೂಡ ತೆರೆಯ ಮರೆಯಲ್ಲಿದ್ದರು .ಅಂತಹ ಸಾಧಕರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುತಿಸುವ ಕಾರ್ಯ ಮಾಡಿದ್ದಾರೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ’ ಡಾ.ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಸುಳ್ಯ ತಹಸೀಲ್ದಾರ್ ಜಿ.ಮಂಜುನಾಥ್, ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕರು ಮತ್ತು ಕುಲ ಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಸಹ ಸಂಯೋಜಕರಾದ ಸಂಜೀವ ಕುದ್ಪಾಜೆ, ಡಾ.ಮಮತಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಂ.ರುದ್ರಕುಮಾರ್ ಎಂ.ಎಂ.ಸ್ವಾಗತಿಸಿದರು. ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕರು ಹಾಗೂ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಬಂಟಮಲೆ ಅಕಾಡೆಮಿ ಆಫ್ ನ್ಯಾಚುರಲ್ ಬಂಟಮಲೆ ಅಕಾಡೆಮಿ ಆಫ್ ನ್ಯಾಚುರಲ್ ಸೈನ್ಸಸ್ ಇದರ ನಿರ್ದೇಶಕ ಎ.ಕೆ.ಹಿಮಕರ ವಂದಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಚಾರಗೋಷ್ಠಿ ನಡೆಯಿತು.