ಸರ್ಕಾರದ ಕೊಡುಗೆಗಳು ಸ್ವಉದ್ಯೋಗದ ಕನಸಿಗೆ ಪೂರಕ- ಅಶೋಕ್ ರೈ
ಪುತ್ತೂರು; ಕುಶಲಕರ್ಮಿಗಳ ಸ್ವ-ಉದ್ಯೋಗದ ಕನಸಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೈಗಾರಿಕಾ ಇಲಾಖೆಯ ಮೂಲಕ ಪುತ್ತೂರು ತಾಲೂಕಿನ ೯೧ ಕುಶಲಕರ್ಮಿಗಳಿಗೆ ವಿವಿಧ ಸಲಕರಣೆಗಳನ್ನು ನೀಡುತ್ತಿದೆ. ತಮ್ಮ ಬದುಕಿನಲ್ಲಿ ಮತ್ತೋರ್ವನನ್ನು ಅವಲಭಿತವಾಗದೆ ಬದುಕುವುದಕ್ಕೆ ಈ ಸುಧಾರಿತ ಸಲಕರಣೆಗಳು ನಿಮಗೆ ಬೆಂಬಲವಾಗಿ ನಿಲ್ಲುತ್ತವೆ. ಇದನ್ನು ನೀವು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಪಂ ತರಬೇತಿ ಸಭಾಂಗಣದಲ್ಲಿ ಕೈಗಾರಿಕಾ ಇಲಾಖೆ ವತಿಯಿಂದ ಕುಶಲಕರ್ಮಿಗಳಿಗೆ ನೀಡಲಾಗುತ್ತಿರುವ ಸುಧಾರಿತ ಸಲಕರಣೆಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.
ಗಾರೆ, ಹೊಲಿಗೆ, ಕಮ್ಮಾರಿಕೆ ಸೇರಿದಂತೆ ವಿವಿಧ ವರ್ಗದ ಕುಶಲಕರ್ಮಿಗಳು ತಮ್ಮ ಬದುಕಿಗಾಗಿ ಇನ್ನೂ ಕೂಡಾ ತಮ್ಮ ಕಸುಬುಗಳನ್ನು ಮಾಡುತ್ತಿದ್ದಾರೆ. ಇಂದು ಆಧುನಿಕ ಯುಗದ ವ್ಯವಹಾರದೊಂದಿಗೆ ಪೈಪೋಟಿ ಮಾಡಬೇಕಾದರೆ ಮಾನವಶ್ರಮಕ್ಕಿಂತ ಹೆಚ್ಚು ಯಂತ್ರೀಕೃತ ವ್ಯವಸ್ಥೆ ಅಗತ್ಯ. ಈ ಹಿನ್ನಲೆಯಲ್ಲಿ ನಿಮ್ಮ ಕೆಲಸಗಳಿಗೆ ವೇಗ ನೀಡಲು ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ಆದರೆ ಈ ಯಂತ್ರಗಳು ಮನೆಯ ಮೂಲೆ ಸೇರುವುದು ಬೇಡ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ನಿರ್ದೇಶಕ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅರ್ಜಿ ಹಾಕಿ ಇಲ್ಲವಾದರೆ ಅನುದಾನ ಲ್ಯಾಪ್ಸ್..!
ಕೈಗಾರಿಕಾ ಇಲಾಖೆಯೂ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ವಿವಿಧ ಸವಲತ್ತು ಯೋಜನೆಗಳಿವೆ. ಇದಕ್ಕೆ ಫಲಾನುಭವಿಗಳು ಅರ್ಜಿ ಹಾಕಿದಿದ್ದರೆ, ಅನುದಾನ ಲ್ಯಾಪ್ಸ್ ಆಗುತ್ತದೆ. ಕಳೆದ ವರ್ಷ ಮಹಿಳಾ ಗುಂಪುಗಳಿಗೆ ಸಂಬಂಧಿಸಿದ ಯೋಜನೆಯೊಂದಿತ್ತು. ಇದರಲ್ಲಿ ರೂ.೨ ಲಕ್ಷ ಸಬ್ಸಿಡಿ ಹಾಗೂ ೧ ಲಕ್ಷ ಸಾಲ ನೀಡುವ ಯೋಜನೆ. ಆದರೆ ಇದಕ್ಕೆ ಯಾರೂ ಅರ್ಜಿ ಹಾಕದ ಕಾರಣ ಈ ಹಣ ಲ್ಯಾಪ್ಸ್ ಆಯಿತು. ಇನ್ನು ಮುಂದೆ ಯಾವುದೇ ಯೋಜನೆಯ ಅನುದಾನಗಳ ಲ್ಯಾಪ್ಸ್ ಆಗದಂತೆ ನಾವು ನೋಡಿಕೊಳ್ಳಬೇಕು. ಮಾದ್ಯಮಗಳ ಮೂಲಕ ಸವಲತ್ತು ಯೋಜನೆಗಳ ವಿವರಗಳನ್ನು ಅಧಿಕಾರಿಗಳು ಪ್ರಚುರಪಡಿಸಬೇಕು- ಅಶೋಕ್ ರೈ