ಶ್ರೀ ಕಾರಿಂಜೇಶ್ವರನ ದೇಗುಲದ ಆವರಣ ಗೋಡೆ ಕುಸಿತ: ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ತಿ

ಬಂಟ್ವಾಳ: ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀ ಕಾರಿಂಜೇಶ್ವರನ ದೇಗುಲದ ಆವರಣ ಗೋಡೆ ಆದಿತ್ಯವಾರ ರಾತ್ರಿ ವೇಳೆ ಮುರಿದು ಬಿದ್ದ ಘಟನೆ ನಡೆದಿದೆ.
ದೇವಸ್ಥಾನದ ಮುಂಭಾಗದಲ್ಲಿ  ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು ಸೋಮವಾರ  ಬೆಳಗ್ಗೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಅಲ್ಲದೇ ಇಲ್ಲಿನ ವಾನರ ಸಮೂಹಕ್ಕೆ ನೈವೇದ್ಯ ನೀಡುತ್ತಿದ್ದ ಅಂಗಣದ ಇಂಟರ್ ಲಾಕ್ ಕಿತ್ತು ಹೋಗಿದೆ.
ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡ ದೇವಸ್ಥಾನಕ್ಕೆ ನಾಲ್ಕು ಯುಗಗಳ ಇತಿಹಾಸವಿದೆ.
*ಶ್ರಮದಾನದ ಮೂಲಕ ದುರಸ್ತಿ ಕಾರ್ಯ*
ಶ್ರೀ ಕಾರಿಂಜೇಶ್ವರ ದೇವಾಲಯದ ತಡೆಗೋಡೆಯನ್ನು ವ್ಯವಸ್ಥಾಪನಾ ಸಮಿತಿಯ ವಿನಂತಿಯ ಮೇಲೆ ಗ್ರಾಮಸ್ಥರು ಸೇರಿಕೊಂಡು ಶ್ರಮದಾನದ ಮೂಲಕ ನಿರ್ಮಿಸುತ್ತಿದ್ದಾರೆ.
ಒಂದು ವಾರದೊಳಗೆ  ದುರಸ್ತಿ ಕಾರ್ಯವನ್ನು ಮಾಡುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ.
ಎತ್ತರದ ಶಿಲಾಬಂಡೆಯ ಮೇಲಿರುವ ದೇವಾಲಯದ ಒಂದು ಪಾರ್ಶ್ವದ ತಡೆಗೋಡೆಯನ್ನು ಪುನರ್ ನಿರ್ಮಿಸಲು ಕೆಳಭಾಗದಲ್ಲಿರುವ ಶ್ರೀ ಪಾರ್ವತಿ ಸನ್ನಿಧಿ ಬಳಿಯಿಂದ ಜನರು ಕಲ್ಲು ಸಿಮೆಂಟ್ ಮತ್ತು ಕಬ್ಬಿಣದ ಸರಳುಗಳನ್ನು ತಲೆ ಹೊರೆಯ ಮೂಲಕ ಹೊತ್ತುತಂದು ಕಾಮಗಾರಿ ನಡೆಸುತ್ತಿದ್ದಾರೆ.
ಕಾಮಗಾರಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಕೂಡ ದಾನಿಗಳ ಮೂಲಕವೇ ಪಡೆಯಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ತಿಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಇದೇ ರೀತಿ ದೇವಾಲಯದ ಎಡ ಭಾಗದ ತಡೆಗೋಡೆ ಕುಸಿತ ಕಂಡು ಬಂದಿತ್ತು.  ಅ ಸಂದರ್ಭದಲ್ಲಿ ಕೂಡ ಗ್ರಾಮಸ್ಥರು ಶ್ರಮದಾನದ ಮೂಲಕವೇ ದುರಸ್ತಿ ಕಾರ್ಯವನ್ಬು ಮಾಡಿದ್ದರು. ಇದೀಗ ಮತ್ತೆ ಅದೇ ರೀತಿ ಶ್ರಮದಾನದ ಮೂಲಕವೇ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದಾರೆ.
ಸರಕಾರಕ್ಕೆ ಮುಂದೆ ಯಾವುದೇ ಬೇಡಿಕೆ ಇಡದೆ ಸಮಿತಿ ಮತ್ತು ಗ್ರಾಮಸ್ಥರೇ ಶ್ರಮದಾನದ ಮೂಲಕ ದುರಸ್ತಿ ಕಾರ್ಯ ಮಾಡುವುದಾಗಿ ಸಮಿತಿ ತಿಳಿಸಿದೆ.
ಅಕ್ರಮ ಗಣಿಗಾರಿಕೆಯ ಎಫೆಕ್ಟ್*
ದೇವಾಲಯದ ಸುತ್ತಮುತ್ತಲಿನ ಗುಡ್ಡದಲ್ಲಿ ನಡೆಯುತ್ತಿದ್ದ    ಅಕ್ರಮ  ಗಣಿಗಾರಿಕೆಯ ಎಫೆಕ್ಟ್ ಇಂದಿನ ದಿನಗಳಲ್ಲಿ ಕುಸಿತ ಕಂಡುಬರಲು ಕಾರಣವಾಗಿದೆ. ಸದ್ಯ ಕಳೆದ ಮೂರು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿದೆಯಾದರೂ ಅದರ ಎಫೆಕ್ಟ್ ಇಂದು ಕೂಡ ಕಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಕಪ್ಪು ಕಲ್ಲು ಸ್ಪೋಟಕ್ಕೆ ಇಡೀ ಕಾರಿಂಜದ ಭೂಮಿ ಬಿರುಕು ಕಂಡಿದೆ. ಇದರ ಎಫೆಕ್ಟ್ ಕಾರಿಂಜ ದೇವಸ್ಥಾದ ಮೇಲೂ ಆಗಿದೆ  ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಕಳೆದ ಬಾರಿ ಕುಸಿತ ಕಂಡಾಗಲೂ ಇದೇ ಆರೋಪವನ್ನು ಮಾಡಲಾಗಿತ್ತು.ಆದರೆ ಸರಿಯಾದ ಕ್ರಮ ಜರಗಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂಬ ಕೂಗು ಕೂಡ ಕೇಳಿ ಬಂದಿದೆ.
*ಕಾರಿಂಜೇಶ್ವರನ ಸರ್ವ ಭಕ್ತರಲ್ಲಿ ಒಂದು ವಿನಂತಿ* *ವ್ಯವಸ್ಥಾಪನಾ ಸಮಿತಿ*
ಕಾರಿಂಜೇಶ್ವರ ದೇಗುಲದ ಆವರಣ ಗೋಡೆ ಮುರಿದು ಬಿದ್ದಿದೆ.ಅನೇಕ ಬಾರಿ ಧಾರ್ಮಿಕ ದತ್ತಿ ಇಲಾಖೆಗೆ ಕೂಡ ಸರಿ ಪಡಿಸಿ ಕಟ್ಟಲು ಅನುಮತಿ ಕೋರಿ ಬರೆಯಲಾಗಿತ್ತು. ಅನೇಕ ಸಾರಿ ಬಿರುಕುಗಳನ್ನು ಗಾರೆ ಹಾಕಿ ಮುಚ್ಚಿ ತಾಯ್ಕಲಿಕ ನೆಲೆಯಲ್ಲಿ ಸರಿ ಪಡಿಸಲಾಗಿತ್ತು. ಬಹುಷಃ ಶ್ರೀ ಕಾರಿಂಜೇಶ್ವರನ ದಯೆಯಿಂದ ಆಟಿ ಅಮಾವಾಸ್ಯೆಯ೦ತಹ ಲಕ್ಷ ಗಟ್ಟಲೆ ಜನ ಸೇರುವಾಗ ಯಾವುದೇ ಅವಗಡ ಆಗದಿರಲಿ ಎಂದು ಪ್ರಾರ್ಥನೆ ಕೂಡ ಮಾಡಲಾಗಿತ್ತು. ಮೇಲೆ ಕುಳಿತ ಮಹಾರಾಯ ಯಾವುದೇ ವಿಪತ್ತು ತಾರದೇ,ಸರಿ ಪಡಿಸಿ ಕೊಡಿ ಎಂದು ಸೂಚನೆ ನೀಡಿರುತ್ತಾನೆ.
ಈಗಲೂ ನಿರ್ಲಕ್ಷ ಮಾಡಿದರೆ ಇನ್ನಷ್ಟು ಬಾಯಿ ತೆರೆದು ನಿಂತ ಬಿರುಕು ಅಪಾಯಕ್ಕೆ ಹೇತುವಾಗುತ್ತದೆ. ಹಾಗಾಗಿ ಶ್ರೀ ಕಾರಿಂಜೇಶ್ವರನ ಭಕ್ತರಲ್ಲಿ ದೇವರ ಪರವಾಗಿ ವಿನಂತಿ ಏನೆಂದರೆ ಇವತ್ತು ಸಂಜೆ ಸರ್ವ ಭಕ್ತರಿಂದ ಸಾರ್ವಜನಿಕ ಶ್ರಮದಾನ ಮಾಡಿ ಇನ್ನಷ್ಟು ಅಪಾಯ ಆಗದಂತೆ ನೋಡಿಕೊಳ್ಳೋಣ. ದೇವರಿಗಾಗಿ ಒಟ್ಟು ಸೇರೋಣ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಇರುವ ಹಾರೆ ಪಿಕ್ಕಾಸು ಸಮೇತ ನೆಪ ಹೇಳದೆ ಕಾರಿಂಜೇಶ್ವರನ ಸನ್ನಿದಾನದಲ್ಲಿ ಸೇರಲು ವಿನಂತಿಸಿಕೊಳ್ಳುತ್ತೇವೆ .