ವರ್ತಮಾನದ ಸಾಹಿತ್ಯ ನೊಂದವರ ಹಸಿವು ಮತ್ತು ಬದುಕಿನ ಅನಾವರಣ
ಕಲಬುರಗಿ:ಸೆ.03:ವರ್ತಮಾನದ ಸಮಾಜಲ್ಲಿ ನೊಂದವರ ಮತ್ತು ಬೆಂದವರ ಬದುಕು ಅಡಗಿದೆ. ಅವರ ನೈಜ ಜೀವನದ ಸಂಗತಿ ಮತ್ತು ಬವಣೆಗಳನ್ನು ಬರೆಯುವ ದೈರ್ಯ ಮತ್ತು ಮನಸ್ಸು ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಗತ್ಯ. ತರಗತಿಯಲ್ಲಿನ ಕಲಿಕೆಗಿಂತ ಸಮಾಜದಲ್ಲಿ ಗೋಚರಿಸುವ ಹಸಿವು ಮತ್ತು ಬದುಕಿನ ಅನಾವರಣವೇ ನಿಜವಾದ ಸಾಹಿತ್ಯ. ಯುವ ಬರಗಾರರಲ್ಲಿ ಆಲೋಚನೆ ಮತ್ತು ಚಿಂತನೆ ಸ್ವಭಾವವಿದ್ದರೆ ಭರವಸೆಯ ಲೇಖಕರಾಗಲು ಸಾಕಷ್ಟು ಅವಕಾಶಗಳಿವೆ ಎಂದು ಕನ್ನಡದ ಖ್ಯಾತ ಕವಿಯತ್ರಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್. ಎಲ್. ಪುಷ್ಪ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸಾಹಿತ್ಯ ಓದುವ ಹವ್ಯಾಸದ ಜೊತೆಗೆ ಜಗತ್ತಿನ ಹಸಿವಿನ ಸಂಗತಿ ಮತ್ತು ಆಸಕ್ತಿದಾಯಕ ವಿಷಯಗಳ ಕುರಿತು ಬರೆಯುವ ಪ್ರವೃತ್ತಿ ಬೆಳೆಸಿಕೊಂಡರೆ ಮನಸ್ಸಿನ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನು ಕಾಪಾಡಬಹುದು. ಹಿಂದಿನ ಕಾಲಘಟ್ಟದಲ್ಲಿ ಸಾಹಿತಿ, ಲೇಖಕರನ್ನು ಹುಡುಕಿಕೊಂಡು ಹೋಗಿ ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರಸ್ತುತ ಯುಗದಲ್ಲಿ ಮಾಧ್ಯಮಗಳ ಸೇವೆಯಿಂದ ಜಗತ್ತಿನ ಎಲ್ಲಾ ಕ್ಷೇತ್ರಗಳ ಪ್ರಚಲಿತ ಮಾಹಿತಿಗಳು ಸುಲಭವಾಗಿ ಸಿಗುತ್ತಿವೆ. ಆಸಕ್ತಿಯಿದ್ದರೆ ಮಾತ್ರ ಸಾಹಿತ್ಯ ಕ್ಷೇತ್ರದಲ್ಲಿ ಲೇಖಕರಾಗಿ ಸಾಹಿತ್ಯಸೇವೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕವಿತೆ ಮಾಯಾಜಿಂಕೆಯಿದ್ದಂತೆ, ಕವಿತೆಗೆ ಅದರದೇ ಆದ ಉದ್ದೇಶ ಮತ್ತು ಆದರ್ಶಗಳಿರುತ್ತವೆ. ಕವಿತೆಗಳಲ್ಲಿ ಜೀವನಸಾರ, ಜೀವನ ಸತ್ವ ಮತ್ತು ಜೀವನ ಸಾಂಗತ್ಯಗಳ ಸಮಗ್ರ ಹೂರಣವಿರುತ್ತದೆ. ಅದನ್ನು ಓದುವ ಆಸಕ್ತಿ, ಅದರಲ್ಲಿನ ಸಾರದ ಗ್ರಹಿಕೆಯಿಂದ ರಂಜಿಸಿ ವಿಮರ್ಶಿಸುವ ಮನಸ್ಸನ್ನು ಬೆಳೆಸುತ್ತದೆ. ಪ್ರಸ್ತುತ ಕವಿ ಮುಖ್ಯವೋ ಅಥವಾ ಕೃತಿ ಮುಖ್ಯವೋ ಎಂಬ ಜಿಜ್ಞಾಸೆಯಿದೆ. ಸಮಾಜಕ್ಕೆ ಆದರ್ಶವಿರುವ ಕವಿ ಮತ್ತು ಕೃತಿ ಎರಡು ಮುಖ್ಯವಾಗಬೇಕು. ಕಾಲ ಬದಲಾದಂತೆ ಸಾಹಿತ್ಯ ಮತ್ತು ಬರವಣಿಗೆ ಬದಲಾಗುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ದಿಮತ್ತೆ ಬೆಳೆಯುತ್ತಿರುವಾಗ ಮಾಧ್ಯಮ, ಕಾಪೋರೃಟ್ ಉದ್ಯಮ ಮತ್ತು ತಾಂತ್ರಿಕ ಬರವಣಿಗೆ ಕುಶಲತೆ ಹೆಚ್ಚು ಬೆಳೆಯುತ್ತಿದೆ. ಅದರಂತೆ ಸಮಾಜದ ವಿವಿಧ ವರ್ಗಗಳ ಜನರ ಜೀವನ, ನಿರೀಕ್ಷೆ, ಆಶಯಗಳಿಗೆ ತಕ್ಕಂತೆ ನೆಮ್ಮದಿ ಮತ್ತು ನಂಬಿಕೆಗೆ ಸಾಹಿತ್ಯ ವಿಶಾಲ ಜಗತ್ತನ್ನು ಪರಿಚಯಿಸುತ್ತಿದೆ.
ಪ್ರಸ್ತುತ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಚರ್ಚೆಯಾಗುತ್ತಿದೆ. ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ವ್ಯವಸ್ಥೆಯ ಎರಡು ಕಣ್ಣುಗಳಿದ್ದಂತೆ. ಎರಡು ಕಣ್ಣುಗಳು ಎಷ್ಟು ಮುಖ್ಯವೋ ದೇಶವನ್ನು ಅರ್ಥವಾಗಲು ಅವರ ಚಂತನೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಕಾಲಕ್ಕೆ ತಕ್ಕಂತೆ ಚಳುವಳಿಗಳ ದಿಕ್ಕು ಬದಲಾಗುತ್ತಿವೆ. ಆಯಾ ಕಾಲ ಮತ್ತು ಪರಿಸರದಲ್ಲಿ ನವ್ಯ, ನವೋದಯ, ಪ್ರಗತಿಶೀಲ, ಬಂಡಾಯ ಒಳಗೊಂಡಂತೆ ದಲಿತ ಸಾಹಿತ್ಯ ಎಲ್ಲಾ ಸ್ತರಗಳ ಜನರ ಆಶಯಗಳಿಗೆ ಮಿಡಿದಿದೆ. ಸಾಹಿತ್ಯ ಮತ್ತು ರಂಗಭೂಮಿ ಜಾಗೃತ ಚಿಂತನೆಯನ್ನು ಬೆಳೆಸುತ್ತಾ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ಬೆಳೆದಿವೆ. ಆದರೆ ಪ್ರಸ್ತುತ ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ. ಆಕ್ರಮಣಗಳು ನಿಲ್ಲದಿರುವುದು ವಿಷಾದಕರ ಸಂಗತಿ ಎಂದರು.
ದೇಶದ ಜನರಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಕಾಮದೇನು ಮತ್ತು ಕಲ್ಪವೃಕ್ಷವಿದ್ದಂತೆ, ಅದರಲ್ಲಿರುವ ಕಾನೂನುಗಳಿಗೆ ಸಮಾಜದ ಬೇಕು ಮತ್ತು ಬೇಡಗಳನ್ನು ನಿಯಂತ್ರಿಸುವ ಶಕ್ತಿಯಿದೆ. ಆದರೂ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆಗಳು ನಾವಿರುವ ಸಮಾಜದಲ್ಲಿ ಭಯವಿಲ್ಲದೆ ನಡೆಯುತ್ತಿವೆ ಏಕೆ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ. ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿರುವ ಸಂವಿಧಾನ ರಕ್ಷಿಸಲು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಹೆಚ್.ಟಿ. ಪೋತೆ ಮಾತನಾಡಿ ದೇಶ ಮತ್ತು ವ್ಯವಸ್ಥೆ ಅರ್ಥವಾಗಲು ಗಾಂಧಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಕಣ್ಣಾಗಿ ನೋಡಬೇಕು. ಅವರ ದೃಷ್ಠಿಕೋನ ತಿಳಿದರೆ ಮಾತ್ರ ವ್ಯವಸ್ಥೆಯೊಳಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಾಹಿತ್ಯ ಮತ್ತು ಸಾಹಿತಿಗಳನ್ನು ಹುಡುಕಿಕೊಂಡು ಹೋಗಿ ಸಾಹಿತ್ಯ ರಚನೆ ಮಾಡುವ ಕಾಲವೊಂದಿತ್ತು. ಇಂದು ಸಾಹಿತ್ಯ ವಲಯದ ಎಲ್ಲಾ ಪ್ರಜಾವಂತ ಲೇಖಕರು, ಕವಿಯತ್ರಿಯರು, ಬುದ್ದಿಜೀವಿಗಳು ವಿದ್ಯಾರ್ಥಿಗಳಿಗೆ ಮುಖಾಮುಖಿಯಾಗಿ ಭೇಟಿ ಮತ್ತು ಚರ್ಚಿಸುವುದು ಸುಲಭವಾಗಿದೆ. ವಿದ್ಯಾರ್ಥಿಗಳು ಸಮಕಾಲೀನ ತಲ್ಲಣ ಮತ್ತು ಸಂಘರ್ಷಗಳನ್ನು ಅರ್ಥಮಾಡಿಕೊಂಡು ಬರವಣಿಗೆ ಮತ್ತು ಅಭಿವ್ಯಕ್ತಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅತಿಥಿ ಪ್ರಾಧ್ಯಾಪಕ ಡಾ. ಸಂತೋಷ್ ಕಂಬಾರ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.