ಔರಾದ ತಾಲೂಕಿನಾದ್ಯಂತ ಸಂಭ್ರಮದ ಹೋಳಾ ಹಬ್ಬ ಆಚರಣೆ
ಔರಾದ :ಸೆ.3: ಭಾರತೀಯ ಸಂಸ್ಕøತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದ್ದು, ಕೃಷಿಕರು ಅವುಗಳನ್ನು ಪೂಜಿಸಿ ಗೌರವಿಸುತ್ತಾರೆ. ರಾಸುಗಳಿಗೆ ಗೌರವಿಸುವ ಸಲುವಾಗಿಯೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಹೋಳಾ ಹಬ್ಬ ಆಚರಣೆ ಸಂಭ್ರಮದಿಂದ ಆಚರಿಸಲಾಗುತ್ತದೆ.
ಪಟ್ಟಣದಲ್ಲಿ ಸೋಮುವಾರ ಸಂಜೆ ರೈತರು ಎತ್ತು, ಹೋರಿ, ಆಕಳುಗಳಿಗೆ ವಿವಿಧ ಬಗೆಯಲ್ಲಿ ಅಲಂಕಾರ ಮಾಡಿ ಗ್ರಾಮ ದೇವರು ಅಮರೇಶ್ವರ ಮಂದಿರಕ್ಕೆ ಹಾಗೂ ಹನುಮಾನ ಮಂದಿರಕ್ಕೆ ಬಂದು ಪೂಜೆ ಸಲ್ಲಿಸುವ ಮೂಲಕ ಹೋಳಾ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ರೈತರು ಎತ್ತು, ಹೋರಿ, ಆಕಳು ಮತ್ತು ಸಣ್ಣ ಕರುಗಳಿಗೆ ಮನೆಯಲ್ಲಿ ಸ್ನಾನ ಮಾಡಿಸಿ, ಅವುಗಳ ಮೈಮೇಲೆ ರಂಗು ರಂಗಿನ ಬಣ್ಣದ ಚಿತ್ತಾರಗಳನ್ನು ಬಿಡಿಸಿದರು. ಕೊಂಬುಗಳಿಗೆ ವಿವಿಧ ಬಣ್ಣ ಸವರಿ ವಿವಿಧ ಭಂಗಿಗಳಲ್ಲಿ ಸಿಂಗರಿಸಿದರು. ಕೊರಳಲ್ಲಿ ಗಂಟೆ ಮತ್ತು ಗೆಜ್ಜೆ ಸರ, ನೂಲಿನ ದಾರದಲ್ಲಿ ಮಾಡಿದ ಗೊಂಡೆ, ಮತ್ತಾಟಿ, ಹೂವು ಮತ್ತು ಉದ್ದ ಬಲೂನ್ ಹಾಗೂ ವಿವಿಧ ಗಾತ್ರದಲ್ಲಿ ತಯಾರಿಸಿದ ಗೊಂಬೆಗಳನ್ನು ಕಟ್ಟಿ ಎತ್ತು ಮತ್ತು ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿದರು. ಎತ್ತುಗಳ ಕೊಂಬುಗಳಿಗೆ ಕೊಡಬೇಳೆ ಹಾಕಿ, ಹುಗ್ಗಿ, ಬೆಲ್ಲದ ನೀರು ಮತ್ತು ಕರಿದ ಪದಾರ್ಥಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ,ಪೂಜೆ ಸಲ್ಲಿಸಿದರು.
ಎತ್ತುಗಳು ಸಾಲಾಗಿ ಮನೆಯತ್ತ ತೆರಳುವ ಮಾರ್ಗದಲ್ಲಿ ಮಂದಿರದ ಎದುರು ಅಡ್ಡಲಾಗಿ ಕಟ್ಟಿದ ಹಗ್ಗವನ್ನು ಬಾರುಕೋಲಿನಿಂದ ಹೊಡೆದು ತುಂಡು ಮಾಡುವ ಮೂಲಕ ಹಬ್ಬವನ್ನು ವೈಶಿಷ್ಟ್ಯತೆಯಿಂದ ಆಚರಿಸಿದರು.ಮಹಿಳೆ ಮತ್ತು ಮಕ್ಕಳು ಸೇರಿದಂತೆ ಗ್ರಾಮದ ಪ್ರಮುಖರು ಹನುಮಾನ ಮಂದಿರಕ್ಕೆ ಆಗಮಿಸಿ ಎತ್ತುಗಳ ಮೆರವಣಿಗೆ ನೋಡಿ ಆನಂದಿಸಿದ್ದರು.
ಸಂದರ್ಭದಲ್ಲಿ ಬಸವರಾಜ ದೇಶಮುಖ, ಶಿವರಾಜ ಅಲ್ಮಾಜೆ, ಸೂರ್ಯಕಾಂತ್ ಬುಟ್ಟೆ,ಅನೀಲ ಕರಂಜೆ,ಪ್ರಕಾಶ ಅಲ್ಮಾಜೆ,ವಿಠಲರಾವ ಕೋಳಿ, ಶ್ರೀಕಾಂತ ಅಲ್ಮಾಜೆ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಎತ್ತುಗಳೊಂದಿಗೆ ರೈತರ ಸಂಭ್ರಮ:
ಹೊಳ ಹಬ್ಬದ ನಿಮಿತ್ತ ಅನ್ನದಾತನ ಬೆನ್ನೆಲುಬಾದ ಎತ್ತುಗಳಿಗೆ ಭಾಸಿಂಗ ಕಟ್ಟಿ, ಮೈ ಮೇಲೆ ಹೊಸ ಬಟ್ಟೆ(ಜೂಲಾ) ಹಾಕಿ ಬಣ್ಣಗಳಿಂದ ಅಲಂಕೃತಗೊಳಿಸಿ, ಕೊರಳಿಗೆ ಹಗ್ಗಗಳಿಂದ ಶೃಂಗಾರಗೊಳಿಸಿ, ಬೆಲ್ಲದ ನೀರು ಕುಡಿಸಿ, ರೈತ ಸಮುದಾಯ ಮನೆಯಲ್ಲಿ ಹೋಳಿಗೆ ಊಟ ಮಾಡಿ ಸಂಭ್ರಮದಿಂದ ಸಾಮರಸ್ಯ ಸಾರುವ ಸಾಂಪ್ರದಾಯಿಕ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ವಿಶೇಷ ಎತ್ತುಗಳಿಗೆ ಬಹುಮಾನ ವಿತರಣೆ
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಹೊಳ ಹಬ್ಬವನ್ನು ಸಡಗರ ಸಂಭ್ರಮದಿಂದ ಜರುಗಿತು. ಪಟ್ಟಣದ ಅಮರೇಶ್ವರ ದೇವಸ್ಥಾನದಿಂದ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆಯಲ್ಲಿ ಎತ್ತುಗಳ ಶೃಂಗಾರ ಹಾಗೂ ಮೈಕಟ್ಟು ಪ್ರದರ್ಶನದಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ರೈತರಿಗೆ ಸ್ಥಳೀಯ ಮುಖಂಡರಾದ ಕಲ್ಲಪ್ಪ ದೇಶಮುಖ ಅವರಿಂದ ಬಹುಮಾನ ವಿತರಿಸಲಾಯಿತು.