ಸಿಂದಗಿ: ಚಿರತೆ ಹಾವಳಿ, ಗ್ರಾಮಸ್ಥರಲ್ಲಿ ಆತಂಕ
ವಿಜಯಪುರ,ಸೆ.3: ಜಿಲ್ಲೆಯ ಸಿಂದಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಚಿರತೆ ಹಾವಳಿ ಕಂಡು ಬಂದಿದ್ದು, ಈ ಚಿರತೆ ಹಲವಾರು ಜಾನುವಾರುಗಳನ್ನು ತಿಂದಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಸಿಂದಗಿ ತಾಲೂಕಿನ ಆಸಂಗಿಹಾಳ, ದೇವರ ನಾವದಗಿ ಬಳಿ ಚಿರತೆ ಹೆಜ್ಜೆಗಳು ಕಂಡು ಬಂದಿದ್ದು, ಅಲ್ಲದೆ ನಾಯಿ, ಎಮ್ಮೆ, ಆಕಳನ್ನು ತಿಂದಿದೆ. ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಆಸಂಗಿಹಾಳ ಗ್ರಾಮದ ರೈತರ ಆಕಳನ್ನು ಚಿರತೆ ತಿಂದಿದ್ದು, ದೇವರ ನಾವದಗಿ ಗ್ರಾಮದ ಭೀಮರಾಯ ಜನಿವಾರ ಎಂಬುವರ ನಾಯಿ ಹಾಗೂ ಎಮ್ಮೆಯನ್ನು ಚಿರತೆ ತಿಂದಿದೆ.
ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ, ಆರ್.ಎಫ್ ಒ ರಾಜೀವ ಬಿರಾದಾರ ನೇತೃತ್ವದಲ್ಲಿ ಎರಡು ಬೋನ್ ಅಳವಡಿಕೆ ಮಾಡಿದ್ದಾರೆ.
ಆಸಂಗಿಹಾಳ ಗ್ರಾಮದ ತೋಟದಲ್ಲೊಂದು ಹಾಗೂ ದೇವರ ನಾವದಗಿ ಗ್ರಾಮದ ಬಳಿಯ ತೊಟದಲ್ಲೊಂದು ಬೋನ್ ಅಳವಡಿಕೆ ಮಾಡಲಾಗಿದೆ.
ಎಂಟು ಜನ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದ್ದು, ಬೋನ್ ಬಳಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಚಿರತೆ ಬೋನಿಗೆ ಬಿದ್ದಿಲ್ಲ. ಚಿರತೆ ಹುಡುಕುವ ಕಾರ್ಯಾಚರಣೆ ಚುರುಕುಗೊಂಡಿದೆ.