ನಿರಾಣಿಯವರೇ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ:ಸ್ನೇಹಲತಾ ಶೆಟ್ಟಿ ಕಿವಿಮಾತು
ವಿಜಯಪುರ,ಸೆ.3: ಅಭಿವೃದ್ಧಿ ಎಂದರೆ ಏನು ಎಂಬುದನ್ನು ಇಡಿ ನಾಡಿಗೆ ತೋರಿಸಿಕೊಟ್ಟು ಆಧುನಿಕ ಭಗೀರಥ ಎನಿಸಿಕೊಂಡ ಸಚಿವ ಎಂ.ಬಿ. ಪಾಟೀಲ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಚಿವ ಮುರುಗೇಶ ನಿರಾಣಿಯವರೇ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಮಾತನಾಡಿ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಸ್ನೇಹಲತಾ ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಎಂ.ಬಿ.ಪಾಟೀಲರ ತಂಟೆಗೆ ಬರುವ ಮೊದಲು 2013ರ ಚುನಾವಣೆ ನೆನೆಪಿಸಿಕೊಳ್ಳಿ. ಎಂ.ಬಿ.ಪಾಟೀಲರ ತಂಟೆಗೆ ಬಂದವರೆಲ್ಲ ಕಳೆದ ಮೂರು ಚುನಾವಣೆ ಗಳಲ್ಲಿ ಏನಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಿ ಎಂದಿದ್ದಾರೆ.
ಯಾರೋ ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಲ್ಲಿ ನೀನು ಮಜಾ ಮಾಡುತ್ತಿದ್ದೀಯಾ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು ಎಂದೆಲ್ಲ ಎಂ.ಬಿ. ಪಾಟೀಲರಿಗೆ ಪ್ರಶ್ನೆ ಮಾಡುತ್ತೀರಲ್ಲಾ. ನೀರಾವರಿಯಲ್ಲಿ ಇದುವರೆಗೂ ಯಾರೂ ನೀಡದಂತಹ ಕೊಡುಗೆಯನ್ನು ಕೊಟ್ಟಿದ್ದು, ಬರದ ನಾಡು ಎನಿಸಿಕೊಳ್ಳುತ್ತಿದ್ದ ಜಿಲ್ಲೆಯನ್ನು ಹಸಿರು ನಾಡಾಗಿಸಿದ್ದಾರೆ. ಎಂ.ಬಿ.ಪಾಟೀಲರ ನೀರಾವರಿ ಸಾಧನೆಯನ್ನು ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಲ್ಲಿ ಜನರು ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಂ.ಬಿ. ಪಾಟೀಲ ಅವರು ಮುರುಗೇಶ ನಿರಾಣಿ ಹಾಗೂ ಅವರ ಕುಟುಂಬದವರಂತೆ ಕೇವಲ ತಮ್ಮ ಅಭಿವೃದ್ಧಿಯನ್ನು ಮಾತ್ರ ಮಾಡಿಕೊಳ್ಳುವಂತಹ ವ್ಯಕ್ತಿ ಅಲ್ಲ. ಇದನ್ನು ಅರಿತುಕೊಂಡು ಯಾರ ಬಗ್ಗೆಯಾದರೂ ಹಗುರವಾಗಿ ಮಾತನಾಡುವ ಮುಂಚೆ 10 ಬಾರಿ ಯೋಚನೆ ಮಾಡಿ ಮಾತನಾಡಬೇಕು ಎಂದು ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.