ಭೂ ಮಂಜೂರಾತಿ ಕೈಬಿಡುವಂತೆ ಸರ್ಕಾರಕ್ಕೆ ಎಐವೈಎಫ್ ಆಗ್ರಹ
ಆಳಂದ:ಸೆ.3: ರಾಜ್ಯ ಸಚಿವ ಸಂಪುದಲ್ಲಿ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯಕ್ಕೆ ಸೇರಿದ 3-00 ಎಕರೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಿರುವುದನ್ನು ವಿರೋಧಿಸಿ ಸ್ಥಳೀಯ ಅಖಿಲ ಭಾರತ ಯುವಜನ ಫೆಡರೇಷನ್ ಸಂಘಟನೆ ಮುಖಂಡ ಆಶ್ಫಾಕ್ ಮುಲ್ಲಾ ನೇತೃತ್ವದಲ್ಲಿ ಕಾರ್ಯಕರ್ತರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದಲ್ಲಿ ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ ಅವರ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿ ಭೂ ಮಂಜೂರಾತಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕಲಬುರಗಿಯ ಶೈಕ್ಷಣಿಕ ಚಟುವಟಿಕೆಗೆ ಅನುಕೂಲಕ್ಕೆ ಬಳಕೆಯಾಗಬೇಕಿದ್ದ ಭೂಮಿಯನ್ನು ಜಾತಿ ಸಂಘಟನೆಗೆ ಮಂಜೂರು ಮಾಡಿರುವ ಸರ್ಕಾರದ ಈ ಕ್ರಮ ಶಿಕ್ಷಣವಿರೋಧಿಯಾಗಿದೆ. ಶೈಕ್ಷಣಿಕ ಕಾರಚಟುವಟಿಕೆ ನಡೆಸುವ ಸ್ಥಳದಲ್ಲಿ ಜಾತಿ ಸಂಘಟನೆ ತಲೆ ಎತ್ತಲು ಅವಕಾಶ ಮಾಡಿಕೊಡಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದರು.
ಬಳ್ಳಾರಿ ಜಿಲ್ಲೆಯ ತೋರಣಗಲ್ಲು- ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾದ ಜಿಂದಾಲ್ ಸ್ಟೀಲ್ಸ್ (ಎSW) ಕಂಪನಿಗೆ ಸುಮಾರು ನಾಲವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ 3667.31 ಎಕರೆ ಜಮೀನನ್ನು ರಾಜ್ಯ ಬೊಕ್ಕಸಕ್ಕೆ ನಷ್ಟಮಾಡಿಕೊಂಡು ಶುದ್ಧ ಕ್ರಯ ಮಾಡಿಕೊಡಲು ಮುಂದಾಗಿರುವುದು ಖಂಡನೀಯ. ರಾಜ್ಯ ಸರಕಾರ ಈ ನಿರ್ಣಯವನ್ನು ಕೂಡ ಕೈಬಿಡುವಂತೆ ಆಗ್ರಹಿಸಿದರು.
ಕೆಎಎಸ್ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಲೋಪಗಳಿಂದ ಕೂಡಿದ್ದು, ಇದು ಕೆಪಿಎಸ್‍ಸಿಯ ನಿರ್ಲಕ್ಷ್ಯವನ್ನು ತೋರುತ್ತದೆ. ಕೆಪಿಎಸ್‍ಸಿಯ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮುಖಂಡ ಆಶ್ಫಾಕ್ ಮುಲ್ಲಾ, ಕಮಲೇಶ ಅವುಟೆ, ಗೋಪಾಲ ಟಿ. ಕುಂಬಾರ, ಗೋವಿಂದ ಕೆ. ಅವುಟೆ, ರಾಜು ಪೂಜಾರಿ, ತುಕಾರಾಮ ನಕಾತೆ, ವೆಂಕಟ ಪೂಜಾರಿ ಮತ್ತಿತರು ಒತ್ತಾಯಿಸಿ ಮನವಿ ಸಲ್ಲಿಸಿದರು.