ಶಾಸಕ ಸವದಿ ಮೇಲುಗೈ ಕಾಂಗ್ರೆಸ್ ತೆಕ್ಕೆಗೆ :ಅಥಣಿ ಪುರಸಭೆ ಅಧ್ಯಕ್ಷರಾಗಿ ಬುಟಾಳಿ, ಉಪಾಧ್ಯಕ್ಷರಾಗಿ ಯಕ್ಕಂಚಿ ಅವಿರೋಧ ಆಯ್ಕೆ
ಅಥಣಿ :ಸೆ.3: ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ಪುರಸಭೆಯ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ಚುನಾವಣೆ ಪ್ರಕ್ರಿಯೆ ಜರುಗಿತು. ನೂತನ ಅಧ್ಯಕ್ಷರಾಗಿ ಶಿವಲೀಲಾ ಸದಾಶಿವ ಬುಟಾಳಿ ಹಾಗೂ ಉಪಾಧ್ಯಕ್ಷರಾಗಿ ಭುವನೇಶ್ವರಿ ಬೀರಪ್ಪ ಯಕ್ಕಂಚಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
27 ಜನ ಸದಸ್ಯರ ಬಲಾಬಲ ಹೊಂದಿರುವ ಅಥಣಿ ಪುರಸಭೆಯಲ್ಲಿ ಕಾಂಗ್ರೆಸ್ಸಿನ 15 ಜನ ಸದಸ್ಯರು ಮತ್ತು ಬಿಜೆಪಿಯಿಂದ 9 ಜನ ಸದಸ್ಯರು ಮತ್ತು ಪಕ್ಷೇತರ 3 ಜನ ಸದಸ್ಯರು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ನಂತರ ಅವರ ಬೆಂಬಲಿತ ಸದಸ್ಯರೆಲ್ಲರೂ ಸವದಿ ಅವರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚಿಗೆ ಜರುಗಿದ ಲೋಕಸಭಾ ಚುನಾವಣೆ ನಂತರ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ ಮಧ್ಯೆ ಮನಸ್ತಾಪವಾಗಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂಬ ಗುಂಪುಗಾರಿಕೆ ರಾಜಕೀಯ ತೀವ್ರ ಕುತೂಹಲ ಕೆರಳಿಸಿತ್ತು.
ಕಳೆದ ಒಂದು ವಾರದ ಹಿಂದೆ ಮೂಲ ಕಾಂಗ್ರೆಸ್ಸಿನ 15 ಜನ ಸದಸ್ಯರು ಸಚಿವ ಸತೀಶ ಜಾರಕಿಹೊಳಿಯವರನ್ನು ಭೇಟಿಯಾಗುವ ಮೂಲಕ ನಿನ್ನೆಯವರೆಗೆ ಬೇರೆಕಡೆ ಠಿಕಾಣಿ ಹೂಡಿದ್ದರು. ಸ್ವ ಪಕ್ಷದಲ್ಲಿಯೇ ಆಕಾಂಕ್ಷಿಗಳು ಹೆಚ್ಚಾಗಿ, ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂಬ ಗುಂಪುಗಾರಿಕೆಯನ್ನು ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ರವಿವಾರ ಸಭೆ ನಡೆಸಿ ಸಂಧಾನ ನಡೆಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಸೋಮವಾರ ನಿಗದಿಪಡಿಸಲಾದ ಚುನಾವಣಾ ಪ್ರಕ್ರಿಯೆಂತೆ ಮುಂಜಾನೆ 10 ಗಂಟೆಗೆ ಶಿವಲೀಲಾ ಸದಾಶಿವ ಬುಟಾಳಿ ಅಧ್ಯಕ್ಷ ಸ್ಥಾನಕ್ಕೆ ( ಸಾಮಾನ್ಯ ಮಹಿಳೆ ಮಿಸಲು) ಮತ್ತು ಭುವನೇಶ್ವರಿ ಬೀರಪ್ಪ ಯಕ್ಕಂಚಿ ( ಹಿಂದುಳಿದ ವರ್ಗಗಳ ಮಹಿಳೆ ಮೀಸಲು ) ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅವರ ವಿರುದ್ಧ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದೇ ಇರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಮಧ್ಯಾಹ್ನ 2 ಗಂಟೆಗೆ ಚುನಾವಣಾ ಅಧಿಕಾರಿಯಾಗಿದ್ದ ತಹಶೀಲ್ದಾರ್ ಸಿದರಾಯ ಬೋಸಗೆ ಅವರು ಅಧ್ಯಕ್ಷರಾಗಿ ಶಿವಲೀಲಾ ಬುಟಾಳಿ ಮತ್ತು ಉಪಾಧ್ಯಕ್ಷರಾಗಿ ಭುವನೇಶ್ವರಿ ಯಕ್ಕಂಚಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಪುರಸಭೆಯ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಉಪತಹಸಿಲ್ದಾರ ಎಂ. ವೈ ಯತ್ನಟ್ಟಿ ಸಹಾಯಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಶಿವಲೀಲಾ ಬುಟಾಳಿ ಮಾತನಾಡಿ ನಾನು ಮೊದಲ ಬಾರಿಗೆ ಪುರಸಭೆ ಸದಸ್ಯೆಯಾಗಿ ಇಂದು ನಡೆದ ಚುನಾವಣೆಯಲ್ಲಿ ಪಕ್ಷದ ಎಲ್ಲ ಹಿರಿಯ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನ ಹಾಗೂ ಎಲ್ಲಾ ಪುರಸಭೆ ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಪುರಸಭೆಯ ಎಲ್ಲಾ ಸದಸ್ಯರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭ ಹಾರೈಸಿದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಅಥಣಿ ಪಟ್ಟಣದ ರಾಜ್ಯದ ಮೊದಲ ಪುರಸಭೆಯಾಗಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಪುರಸಭೆ ಶೀಘ್ರದಲ್ಲಿಯೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಲಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ ಪಟ್ಟಣಕ್ಕೆ 24 ಗಂಟೆ ಶುದ್ಧ ಕುಡಿಯುವ ನೀರಿನ ಯೋಜನೆ , ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಪುರಸಭೆ ಆಡಳಿತದ ಎಲ್ಲ ಸದಸ್ಯರು ದೂರ ದೃಷ್ಟಿ ಮತ್ತು ಬದ್ಧತೆಯನ್ನು ಇಟ್ಟುಕೊಂಡು ಎಲ್ಲಾ ವಾರ್ಡಿನ ಜನತೆಯ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಸಂತೋಷ ಸಾವರ್ಕರ, ದತ್ತಾ ವಾಸ್ಟರ್, ರಾಜೂ ಗುಡೋಡಗಿ, ಮಲ್ಲು ಹುದ್ದಾರ, ಮಲ್ಲಿಕಾರ್ಜುನ ಬುಟಾಳೆ, ರಿಯಾಜ ಸನದಿ, ಪ್ರಮೋದ ಬಿಳ್ಳೂರ, ಉದಯ ಸೋಳಶಿ, ಬಸವರಾಜ ನಾಯಿಕ, ಸೈಯದ್ ಅಮೀನ ಗದ್ಯಾಳ, ಶಾಂತಾ ಲೋಣಾರೆ, ಜುಲೇಕಾ ಖೇಮಲಾಪೂರ, ವಿದ್ಯಾ ಐಹೊಳೆ, ಸುಜಾತಾ ಬಡಕಂಬಿ, ವಿದ್ಯಾ ಹಳ್ಳದಮಳ, ಮೃಣಾಲಿನಿ ದೇಶಪಾಂಡೆ, ಬಿಬಿಜಾನ ತಾಂಬೋಳಿ, ಬುಡಾ ನಿಗಮ ಅಧ್ಯಕ್ಷ ಹಾಗೂ ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಶಿವಕುಮಾರ್ ಸವದಿ, ಸದಾಶಿವ ಬುಟಾಳೆ, ಬಸವರಾಜ ಬುಟಾಳೆ. ಯುವ ಕಾಂಗ್ರೆಸ್ ಅಧ್ಯಕ್ಷ ರವಿ ಭಡಕಂಬಿ. ಸಚೀನ್ ಬುಟಾಳೆ, ಆಸೀಫ್ ತಾಂಬೋಳಿ. ಬಸವರಾಜ ಹಳ್ಳದಮಳ,, ಬೀರಪ್ಪ ಯಕ್ಕಂಚಿ, ಅಸ್ಲಮ್ ನಾಲಬಂದ, ರಾಮನಗೌಡ ಪಾಟೀಲ, ಮಲ್ಲು ಕುಲ್ಲೋಳ್ಳಿ, ಮುತ್ತು ಮೊಕಾಶಿ, ಬಸು ತೇರದಾಳ, ಮಂಜು ಹೋಳಿಕಟ್ಟಿ ಸೇರಿದಂತೆ
ಚುನಾವಣಾ ಸಿಬ್ಬಂದಿ, ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಿಪಿಐ ರವೀಂದ್ರ ನಾಯ್ಕೋಡಿ ಹಾಗೂ ಪಿಎಸ್‍ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಪೆÇೀಲಿಸ್ ಇಲಾಖೆಯ ಸಿಬ್ಬಂದಿ ಪುರಸಭೆಯ ಸುತ್ತಲೂ ಬಿಗಿ ಭದ್ರತೆ ಕೈಗೊಂಡಿದ್ದರು.
ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹೆಚ್ಚಿನ ಆಕಾಂಕ್ಷಿಗಳು ಇರುವುದು ಸಹಜ, ಅವಿರೋಧ ಆಯ್ಕೆಯಾಗುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬ ವಿಚಾರವನ್ನು ಈ ಕ್ಷೇತ್ರದ ಶಾಸಕರಾಗಿ ನಾನು ಎಲ್ಲ ಸದಸ್ಯರಿಗೆ ಮನವರಿಕೆ ಮಾಡಿದಾಗ ಎಲ್ಲರೂ ಸಹಕಾರ ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಎಲ್ಲಾ ಸದಸ್ಯರು ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸಹಕಾರವನ್ನು ನೀಡುವ ಮೂಲಕ ಪಟ್ಟಣದ ಸವಾರ್ಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು.