ಬಿಜ್ಜಳ ರಾಜ್ಯ ಹೆದ್ದಾರಿಯ ಮದ್ಯ ವಿಭಜಕದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಬಸವನಬಾಗೇವಾಡಿ, ಸೆ. 3:ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮುಂಭಾಗ ಬಿಜ್ಜಳ ರಾಜ್ಯ ಹೆದ್ದಾರಿಯ ಮದ್ಯ ವಿಭಜಕ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ 2023-24 ನೇ ಸಾಲಿನ 5054 ಅಪೆಂಡಿಕ್ಸ್ ಇ ಲೆಕ್ಕ ಶೀರ್ಷಿಕೆಯ ಯೋಜನೆಯಡಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಹಾಗೂ ಬಸವನಬಾಗೇವಾಡಿ ಪಟ್ಟಣದ ಪರಿಮಿತಿಯಲ್ಲಿ ಹಾಯ್ದು ಹೋಗುವ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿಯ ಮದ್ಯ ವಿಭಜಕವನ್ನು ಅಂದಾಜು ರೂ. 1.78 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವದು. ಈ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಯುವಮುಖಂಡ ಬಸವರಾಜ ಕೋಟಿ, ಪುರಸಭೆ ಮಾಜಿ ಸದಸ್ಯರಾದ ಸಂಗಮೇಶ ಓಲೇಕಾರ, ಬಸವರಾಜ ರಾಯಗೊಂಡ, ಗುರಲಿಂಗ ಬಸರಕೋಡ, ಪುರಸಭೆ ಸದಸ್ಯ ನಜೀರ ಗಣಿ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಲೋಕೋಪಯೋಗಿ ಇಲಾಖೆಯ ಎಇಇ ಜೆ.ವಿ.ಕಿರಸೂರ, ಗುತ್ತಿಗೆದಾರ ಶರಣು ಆಲೂರ, ಜಿಪಂ ಎಇಇ ವಿಲಾಸ ರಾಠೋಡ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ ಸೇರಿದಂತೆ ಇತರರು ಇದ್ದರು. ನಂತರ ಪಟ್ಟಣದ ಪುರಸಭೆಗೆ ತೆರಳಿ ಪುರಸಭೆ ಆವರಣದಲ್ಲಿ ವಿವಿಧ ಉದ್ಯಾನವನಗಳಲ್ಲಿ ಕೂಡಿಸಲು ತಂದಿಟ್ಟಿರುವ ಮಕ್ಕಳ ಆಟಿಕೆ ಸಾಮಾನುಗಳು, ವ್ಯಾಯಾಮ ಸಾಮಾನುಗಳನ್ನು ಸಚಿವರು ವೀಕ್ಷಿಸಿದರು.