ಕೆಎಎಸ್ ಮರು ಪರೀಕ್ಷೆ ನಿರ್ಧಾರ: ಶಾಸಕ ಯತ್ನಾಳ ಸ್ವಾಗತ
ವಿಜಯಪುರ,ಸೆ.3: ಕೆ.ಎ.ಎಸ್ ಪರೀಕ್ಷಾರ್ಥಿಗಳ ಹಾಗೂ ನಮ್ಮ ನಿರಂತರ ಪ್ರಯತ್ನ ಮತ್ತು ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ವಿವೇಚನಾಯುತ ನಿರ್ಧಾರವನ್ನು ಸ್ವಾಗತಿಸಿ, ತಕ್ಷಣ ಜಾರಿಗೆ ಬರುವಂತೆ ಆಯೋಗದಲ್ಲಿ ಕೆಲ ಸುಧಾರಣೆಗಳನ್ನು ಮಾಡಬೇಕು ಎಂದು ನಗರ ಶಾಸಕÀ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಪರೀಕ್ಷಾರ್ಥಿಗಳು ವಾಸಿಸುವ ಊರು ಅಥವಾ ಗರಿಷ್ಟ 50 ಕಿ.ಮೀ. ದೂರವಿರುವ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಭಾನುವಾರವೇ ಪರೀಕ್ಷೆ ಆಗಬೇಕು ಮತ್ತು ಯಾವುದೇ ಇತರೆ ಪರೀಕ್ಷೆ ಇದ್ದ ದಿನ ವೇಳಾಪಟ್ಟಿ ಮಾಡಬಾರದು. ಲೋಕಸೇವಾ ಆಯೋಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ ಐಎಎಸ್ ಕೆ.ಎಸ್.ಲತಾ ಕುಮಾರಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು. ಹಾಗೆಯೇ ಆಯೋಗದ ಅಧ್ಯಕ್ಷರನ್ನು ಕೂಡಲೇ ಬದಲಿಸಬೇಕು. ಆಯೋಗವು ಆಯೋಜಿಸಿದ್ದ ಎಲ್ಲಾ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಯೋಗವು ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಧೃಡೀಕರಿಸಲು ಆಯೋಗದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಆಗಬೇಕು. ಆಯೋಗದಲ್ಲೇ ಪ್ರಶ್ನೆಗಳು ತರ್ಜುಮೆ ಆಗಬೇಕು. ಪರೀಕ್ಷೆಯ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಆಯೋಗ ಪ್ರಕಟಿಸಬೇಕು. ಇದರಿಂದ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ಇದೆ ಮತ್ತು ಅವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಆಯೋಗದಲ್ಲಿರುವ ಭ್ರಷ್ಟರು, ದಲ್ಲಾಳಿಗಳ ಮೇಲೆ ಹಾಗೂ ಪರೀಕ್ಷಾರ್ಥಿಗಳ ಹಿತಾಸಕ್ತಿಯ ವಿರುದ್ಧ ನಿರ್ಧಾರವನ್ನು ಕೈಗೊಳ್ಳುವವರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಿ ಅಥವಾ ಶಿಸ್ತು ಕ್ರಮ ಜರುಗಿಸಬೇಕು. ಪರೀಕ್ಷೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.