ರೈಲು ಪ್ರಯಾಣಿಕರ ಬೇಡಿಕೆ ಈಡೇರಿಕೆ: ಸಚಿವ ಸೋಮಣ್ಣರಿಗೆ ಅಭಿನಂದನೆ
ಬೆಂಗಳೂರು,ಸೆ.೩-ತುಮಕೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲುಗಳನ್ನು ಓಡಿಸಬೇಕೆಂಬ ತುಮಕೂರಿನ ಜನತೆಯ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ. ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ಓಡಾಟಕ್ಕೆ ಅನುಮೋದನೆ ಹೊರಡಿಸಿದೆ.ಇದರೊಂದಿಗೆ ತುಮಕೂರು- ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ ಎಂದು ಎಂದು ಮಾಹಿತಿ ನೀಡಲಾಗಿದೆ.
ಈ ಎರಡು ಮಾರ್ಗಗಳ ನಡುವೆ ಕೆಲವೇ ದಿನಗಳಲ್ಲಿ ಮೆಮು ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲವಿದ್ಯುತ್ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ಮತ್ತು ತುಮಕೂರಿನ ಜನರ ಬೇಡಿಕೆಗಳಿಗೆ ಸ್ಪಂದಿಸಿ ಮೆಮು ರೈಲುಗಳನ್ನು ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸೋಮಣ್ಣ ಅಭಿನಂದಿಸಿದ್ದಾರೆ.
ದಿನಾಂಕ ೨.೦೯.೨೦೨೪ ರಂದು ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು ಓಡಾಟಕ್ಕೆ ಅನುಮೋದನೆ ಹೊರಡಿಸಿದೆ. ಈ ಸಂತೋಷದ ಸಂಗತಿಯನ್ನು ವಿ. ಸೋಮಣ್ಣ ತುಮಕೂರು ಜನತೆಯೊಂದಿಗೆ ಹಂಚಿಕೊಂಡಿದ್ದಾರೆ.
ಮೆಮು ರೈಲು ಓಡಾಟದ ವಿವರ
ತುಮಕೂರು-ಯಶವಂತಪುರ ಮೆಮು ಟ್ರೈನ್ ೦೬೨೦೧(೬೬೫೬೧) ಬೆಳಗ್ಗೆ ೮.೫೫ಕ್ಕೆ ತುಮಕೂರಿಂದ ಹೊರಟು ೧೦.೨೫ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ ೦೬೨೦೨(೬೬೫೬೨) ಯಶವಂತಪುರದಿಂದ ೫.೪೦ಕ್ಕೆ ಹೊರಟು ಸಾಯಂಕಾಲ ೭.೦೫ಕ್ಕೆ ತುಮಕೂರು ತಲುಪಲಿದೆ. ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ ೦೬೨೦೫(೬೫೬೫) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ ೬.೧೫ಕ್ಕೆ ಹೊರಟು ತುಮಕೂರಿಗೆ ೮.೩೫ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ ೦೬೨೦೬(೬೬೫೬೬)ತುಮಕೂರಿನಿಂದ ಸಾಯಂಕಾಲ ೭.೪೦ಕ್ಕೆ ಹೊರಟು ರಾತ್ರಿ ೧೦.೦೫ಕ್ಕೆ ಬಾಣಸವಾಡಿ ತಲುಪಲಿದೆ.
ಈ ಮೆಮು ರೈಲು ಮಾರ್ಗಮಧ್ಯದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣಾವರ, ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ವಾರದ ೬ ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ ಎಂದು ತಿಳಿದು ಬಂದಿದೆ.
ಇನ್ನು ಯಶವಂತಪುರ – ಹೊಸೂರು ಮೆಮು ರೈಲು ಓಡಾಟಕ್ಕೂ ಸಹ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಟ್ರೈನ್ ಸಂಖ್ಯೆ ೦೬೨೦೩(೬೬೫೬೩) ಯಶವಂತಪುರ- ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು ಬೆಳಗ್ಗೆ ೧೦.೪೫ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ ೧೨.೩೦ಕ್ಕೆ ಹೊಸೂರು ತಲುಪಲಿದೆ. ಅದೇ ರೀತಿ ೦೬೨೦೪(೬೬೫೬೪) ಹೊಸೂರು – ಯಶವಂತಪುರ ಮೆಮು ಸಾಯಂಕಾಲ ೩.೨೦ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ ೫.೧೫ಕ್ಕೆ ಯಶವಶವಂತಪುರ ತಲುಪಲಿದೆ.
ಈ ರೈಲು ಮಾರ್ಗ ಮದ್ಯದಲ್ಲಿ ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿ, ಆನೆಕಲ್ ರಸ್ತೆ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.