ನುಲಿಯ ಚಂದಯ್ಯನವರ ಜಯಂತ್ಯೋತ್ಸವ ಆಚರಣೆ
ಕಲಬುರಗಿ,ಸೆ.3-ಜಿಲ್ಲಾ ಕೊರಮ ಸಮಾಜದ ವತಿಯಿಂದ ಕಾಯಕ ಶರಣ ನುಲಿಯ ಚಂದಯ್ಯನವರ 917ನೇ ಜಯಂತೋತ್ಸವನ್ನು ನಗರದ ಡಾ.ಎಸ್. ಎಂ.ಪಂಡಿತ ರಂಗಮಂದಿರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶರಣ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆಯನ್ನು ಪೂಜ್ಯರು, ಗಣ್ಯರು ಮತ್ತು ಸಮಾಜದ ಮುಖಂಡರು ನೆರವೇರಿಸಿದರು. ಜಗದ್ಗುರು ಡಾ.ಸಾರಾಂಗಧರ ದೇಶಿಕೇಂದ್ರ ಮಾಹಾಸ್ವಾಮಿಗಳು ಸಮಾರಂಭದ ಸಾನಿದ್ಯ ವಹಿಸಿದ್ದರು. ಶಾಸಕ ಎಂ.ವಾಯ್. ಪಾಟೀಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ “ಕೊರಮ ಸಮಾಜ ಬಹಳ ಸಣ್ಣ ಸಮಾಜವಾಗಿದ್ದು, ಗ್ರಾಮೀಣ ಪ್ರದೇಶದ ಕೃಷಿ ಕಾಯಕಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತ ಬಂದಿದ್ದಾರೆ. ಅಸಂಘಟಿತ ಸಮಾಜ ಇದಾಗಿದ್ದು, ಸರಕಾರದ ಸೌಲಭ್ಯ, ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಶರಣ ನುಲಿಯ ಚಂದಯ್ಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ.ಚಿ.ಸಿ.ನಿಂಗಣ್ಣ ನವರು ಮಾತನಾಡಿ, ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪದಲ್ಲಿ ಅನೇಕ ಶಿವಶರಣರಿದ್ದರು. ಕಾಯಕ ನಿಷ್ಠೆ ಶ್ರೇಷ್ಠ ಎಂದು ತಿಳಿದು ನುಲಿಯ ಚಂದಯ್ಯ ಅವರು ಹುಲ್ಲು ಹೊಸೆದು ಹಗ್ಗವನ್ನು ಮಾಡುವ ಕಾಯಕದಲ್ಲಿ ತೊಡಗಿ ಕಾಯಕ ತತ್ವವನ್ನು ಸಾರಿದ ಕಾಯಕ ಶರಣರಲ್ಲಿ ಇವರು ಒಬ್ಬರಾಗಿ ಬಸವಣ್ಣನವರ ಆರ್ಥಿಕ, ಸಾಮಾಜಿಕ ಸುಧಾರಣೆ ಕಾರ್ಯದಲ್ಲಿ ಭಾಗಿಯಾಗಿ ತಾವು ತಿಳಿದು ಕೊಂಡ ಲೋಕ ಸತ್ಯವನ್ನು ತಮ್ಮ ವಚನಗಳ ಮುಖಾಂತರ ಜೀವನ ವೆಂದರೇನು, ದೇವರು, ಧರ್ಮ, ಸ್ವರ್ಗ ನರಕ, ಕಾಯಕ, ಭಕ್ತಿ, ದಾಸೋಹ, ನಡೆ ನುಡಿ, ಸಂಸಾರ, ಹತ್ತಾರು ವಿಷಯಗಳನ್ನು ತಮ್ಮ ವಚನಗಳ ಮುಖಾಂತರ ತಿಳಿಸಿದರು. ನಡೆ ನುಡಿ ಒಂದೇ ಆದಾಗ ಹೊಸ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬುದನ್ನು ತಿಸಿಕೊಟ್ಟಿದ್ದಾರೆ. ಬಸವಣ್ಣ ನ್ನವರ ಸಮಕಾಲಿನ ಶರಣರಾದ ನುಲಿಯ ಚಂದಯ್ಯ ಸಮಾಜ ಸುಧಾರಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶರಣರ ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಪ್ರತಿ ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಡಾ.ಡಿ.ಎನ್.ಪಾಟೀಲ ಕಾರ್ಯಕ್ರಮ ಕುರಿತು ಮಾತನಾಡಿದರು, ಜಿಲ್ಲಾ ಕೊರಮ ಸಮಾಜದ ಮುಖಂಡರಾದ ಭೀಮರಾವ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು, ಇದೆ ಸಂದರ್ಭದಲ್ಲಿ ಸಮಾಜದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊರಮ ಸಮಾಜದ ಕಲಾವಿದರಿಂದ ಕಲೆ ಪ್ರದರ್ಶನ ಜರುಗಿತು. ವಿವಿಧ ತಾಲೂಕುಗಳಿಂದ ಆಗಮಿಸಿದ ಸಮಾಜದ ಗಣ್ಯರು, ಸಮಾಜದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಸಿದ್ದರು.