ಸೆ.೧೮ ಅರಾಭಿಕೊತ್ತನೂರು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ
ಕೋಲಾರ,ಸೆ,೩- ಅರಾಭಿಕೊತ್ತನೂರಿನಲ್ಲಿ ಸೆ.೧೮ ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡಿ, ಸಾಧಕರಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಶಿಕ್ಷಕರಿಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ್ ಮನವಿ ಮಾಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಅರಾಭಿಕೊತ್ತನೂರು ಕ್ಲಸ್ಟರ್ ಹಂತದ ಪ್ರತಿಭಾಕಾರಂಜಿಯನ್ನು ಜಿಲ್ಲೆಯಲ್ಲೇ ಮಾದರಿಯಾಗಿ ನಡೆಸೋಣ, ಈ ನಿಟ್ಟಿಯಲ್ಲಿ ಈ ವ್ಯಾಪ್ತಿಯ ಎಲ್ಲಾ ಕಿರಿಯ,ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಭಾಗವಹಿಸಬೇಕು ಎಂದು ಕೋರಿದರು.
ಇದೇ ಅವಧಿಯಲ್ಲಿ ತಾಲೂಕುಮಟ್ಟದ ಕ್ರೀಡಾಕೂಟ ಇರುವ ಕಾರಣ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಸೆ.೧೮ ರಂದು ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದ್ದು, ಕಿರಿಯ ಪ್ರಾಥಮಿಕ ಹಂತದ ಮಕ್ಕಳಿಗೆ ೧೦, ಹಿರಿಯ ಪ್ರಾಥಮಿಕ ಹಂತದ ಮಕ್ಕಳಿಗೆ ೧೨ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಪ್ರೌಢಶಾಲಾ ಮಕ್ಕಳಿಗೆ ಮಾತ್ರ ಗುಂಪು ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸಿದ್ದು, ಇದರೊಂದಿಗೆ ೧೩ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಕ್ಲಸ್ಟರ್ ಹಂತದ ಸ್ಪರ್ಧೆಗಳನ್ನು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಸಲು ನಿರ್ಧಾರ ಕೈಗೊಂಡ ಸಭೆ, ಪ್ರತಿ ಶಾಲೆಯಿಂದಲೂ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದಲೇ ಅಭ್ಯಾಸ ಮಾಡಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನ ೧ ರಿಂದ ೧೦ನೇ ತರಗತಿವರೆಗಿನ ಶಾಲೆಗಳಲ್ಲಿ ಮೌಲ್ಯಂಕನ ನಡೆಸುವ ಕುರಿತ ಸರ್ಕಾರದ ಸುತ್ತೋಲೆ ವಿತರಿಸಿ ಅದರಂತೆ ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ಶಿಕ್ಷಕರ ಸಂಘದ ಪ್ರತಿನಿಧಿ ಸೋಮಶೇಖರ್,ಪ್ರೌಢಶಾಲಾ ಶಿಕ್ಷಕರಾದ ಎಸ್.ರಂಜನಿ, ಶ್ರೀನಿವಾಸಲು, ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರಾದ ನಾಗರಾಜ್, ಮಂಜುನಾಥ್, ಎನ್.ಭದ್ರೇಗೌಡ, ಜಿ.ನಾರಾಯಣಸ್ವಾಮಿ, ಎನ್.ನಾರಾಯಣಸ್ವಾಮಿ, ಆರ್.ಹಂಸವೇಣಿ, ಕೆ.ವಿ.ಕೆಂಪಣ್ಣ, ಬಿ.ಪದ್ಮಾವತಿ, ವಿ.ಶಿಲ್ಪ, ಟಿ.ಆರ್.ಭಾಗ್ಯಮ್ಮ, ಕೆ.ಟಿ.ಪುಷ್ಪ, ಟಿ.ಎಲ್.ಗೀತಾ, ವಿ.ನಾರಾಯಣಪ್ಪ, ಎನ್.ಡಿ.ರುಕ್ಮಿಣಿ ಮತ್ತಿತರರು ಪಾಲ್ಗೊಂಡಿದ್ದರು.