ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ:ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ:ಸೆ.3:ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಜಾತಿ, ಆದಾಯ ಪ್ರಮಾಣ ಪತ್ರ ನೀಡುವಂತೆ ತಹಶಿಲ್ದಾರಗಳಿಗೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ 1 ವರ್ಷದೊಳಗಿನ ಮಕ್ಕಳಿಗೆ ಗ್ರಾಮ ಪಂಚಾಯಿತಿ, ಪುರಸಭೆಗಳಿಂದ ಜನನ ಪ್ರಮಾಣ ಪತ್ರ ನೀಡಬೇಕು. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನಗರಸಭೆ, ತಹಶೀಲ್ದಾರರಿಂದ ಜಾತಿ, ಆದಾಯ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿದರು.
ಅಲೆಮಾರಿ ಜನಾಂಗದವರಿಗೆ ಈಗಾಗಲೇ ಗೋರನಳ್ಳಿಯಲ್ಲಿ ಗುರುತಿಸಿರುವ ನಿವೇಶನ ಮಂಜೂರು ಮಾಡಿದರು ಸಹ ಸರಿಯಾದ ದಾಖಲಾತಿ ಸಲ್ಲಿಸದ ಕಾರಣ ಅವರ ಹೆಸರಿಗೆ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ ಎಂಬ ದೂರುಗಳು ಬಂದಿದ್ದು, ಕೂಡಲೇ ಸರಿಯಾದ ದಾಖಲಾತಿಗಳನ್ನು ಪಡೆದು ಹಕ್ಕು ಪತ್ರಗಳನ್ನು ವಿತರಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರಾದ ಸಿದ್ರಾಮ ವಾಘಮಾರೆ ಅವರು ಮಾತನಾಡಿ ಹುಮನಾಬಾದ ಮತ್ತು ಇತರೆ ತಾಲೂಕುಗಳಲ್ಲಿ ವಾಸಿಸುತ್ತಿರುವ ಅಲೆಮಾರಿ, ಅರೆ-ಅಲೆಮಾರಿ ಜನಾಂಗದವರಿಗೆ ಸಮುದಾಯ ಭವನ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶಿಲವಂತ, ಸಹಾಯಕ ಆಯುಕ್ತರಾದ ಪ್ರಕಾಶ ಕುದುರೆ, ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯರಾದ ಎನ್.ಎಸ್ ಖಾದ್ರಿ, ಸಂಜು ಚಿದ್ರಿ, ದಶರಥ, ಅನೀಲ್‍ಕುಮಾರ ತುಕಾರಾಮ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸಂಗಿತಾ ಬೀರಾದಾರ, ನಗರಸಭೆ ಆಯುಕ್ತರಾದ ಶಿವರಾಜ ರಾಡೋಡ್, ತಹಶೀಲ್ದಾರ ಟಿ. ಮೇಹತ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕಿನ ತಹಶೀಲ್ದಾರರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.