ಆ್ಯಪ್‍ನಲ್ಲಿ ತೋರಿಸದ ಬೆಳೆ ವರದಿ :ಆರಂಭಗೊಳ್ಳದ ಹೆಸರು ಖರೀದಿ ಕೇಂದ್ರ: ರೈತರ ಪರದಾಟ
ಆಳಂದ:ಸೆ.3: ಪ್ರಸಕ್ತ ಸಾಲಿನ ಅಲ್ಪಾವಧಿ ಬೆಳೆ ಹೆಸರು ಖರೀದಿಗೆ ಸರ್ಕಾರ ಆದೇಶಿಸಿದರು ಸಹ ಖರೀದಿ ಕೇಂದ್ರಗಳಲ್ಲಿ ರೈತರ ಧಾನ್ಯ ಸಲಿಸಾಗಿ ಖರೀದಿಗೆ ನಡೆಯುತ್ತಿಲ್ಲ. ಈ ಹಿಂದೆಯೇ ನಡೆಬೇಕಿದ್ದ ಬೆಳೆ ಸಮೀಕ್ಷೆಗೆ ಸಂಬಂಧಿತ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಿಂದೇಟಾಗಿದ್ದರಿಂದ ಈಗ ತಾಲೂಕಿಗೆ ಅನುಮತಿ ದೊರೆತ 30 ಖರೀದಿ ಕೇಂದ್ರಗಳಲ್ಲೂ ತಾಂತ್ರಿಕ ಬಿಕ್ಕಟ್ಟು ಎದುರಾಗಿದ್ದು, ಹೀಗಾಗಿ ಬೆಳೆಗಾರರು ಪರದಾಡತೊಡಗಿದ್ದಾರೆ.
ಸರ್ಕಾರದ ಬೆಳೆ ದರ್ಶಕ ಆ್ಯಪ್‍ನಲ್ಲಿ ಬಹುತೇಕ ರೈತರ ಬೆಳೆ ಸಮೀಕ್ಷೆಗೆ ಹಿಂದೇಟಾಗಿದೆ. ಈ ಹಿನ್ನೆಲೆಯಲ್ಲಿ ಈಗ ಹೆಸರು ಉತ್ಪಾದಿತ ರೈತರು ಮಾರಾಟಕ್ಕೆ ಮುಂದಾಗಿ ಖರೀದಿ ಕೇಂದ್ರಗಳಿಗೆ ಹೋದರೆ, ಕೇಂದ್ರಗಳಿಗೆ ಸರ್ಕಾರ ನೀಡಿದ ಖರೀದಿ ಆಪ್‍ನಲ್ಲಿ ಬೆಳೆ ನಮೋದಿತವಾಗಿಲ್ಲ ಎಂದು ತೋರಿಸುತ್ತಿದೆ. ಇದರಿಂದಾಗಿ ತಾಲೂಕಿನ ಯಾವ ಖರೀದಿ ಕೇಂದ್ರದಲ್ಲೂ ಹೆಸರು ಖರೀದಿಯ ಪ್ರಕ್ರಿಯೆ ನಡೆಯದಂತಹ ಬಿಕ್ಕಟ್ಟು ಸೃಷ್ಟಿಯಾಗಿದ್ದು ರೈತರು ಕಂಗಾಲಾಗಿಸಿದೆ.
ಈ ತೊಂದರೆ ನಿವಾರಣೆಗೆ ಕಂದಾಯ ಕೃಷಿ ಹೀಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ರೈತ ಸಮುದಾಯ ಒತ್ತಾಯಿಸತೊಡಗಿದೆ.
ಪಿಆರ್‍ಒ ಮುನಿಸು: ಬೆಳೆ ದರ್ಶಕ ಆ್ಯಫ್‍ನಲ್ಲಿ ಬೆಳೆ ನೋಂದಾಯಿತ ರೈತರ ಬೆಳೆÀ ಮಾತ್ರ ಖರೀದಿಸಲು ಸರ್ಕಾರದ ನಿಯಮವಿದ್ದು, ಇದರಿಂದ ರೈತರಿಗೆ ತಾಂತ್ರಿಕ ತೊಂದರೆ ಎದುರಾಗುತ್ತಿದೆ. ಈ ನಡುವೆ ತಮ್ಮ ಗೌರವ ಧನ ಹೆಚ್ಚಿಸಬೇಕು ಎಂದು ಬೆಳೆ ಸಮೀಕ್ಷಾ ಪಿಆರ್‍ಗಳು ಮುನಿಸಿಕೊಂಡು ಸಮೀಕ್ಷೆಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಪಿಆರ್‍ಒಗಳ ಮತ್ತು ಇಲಾಖೆಯ ಹಗಜಗ್ಗಾಟದಲ್ಲಿ ಈಗ ಬೆಳೆ ದರ್ಶಕ ಆ್ಯಫ್‍ನಲ್ಲಿ ಬೆಳೆ ನೋಂದಾಯಿಸದ ಕಾರಣ ಮಾರಾಟಕ್ಕೆ ಮುಂದಾದ ರೈತರಿಗೆ ಮತ್ತು ಖರೀದಿ ಕೇಂದ್ರಗಳಿಗೆ ಇಕ್ಕಟ್ಟಿಗೆ ಸಿಲುಕುಂತಾಗಿದೆ.
ಬೆಲೆ ಕುಸಿತ: ಮಾರುಕಟ್ಟೆಯಲ್ಲಿ ಹೆಸರು ಉದ್ದಿನ ಬೆಲೆ ತೀರಾ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಕ್ಕೂ ಹೋಗಿ ಮಾರಾಟ ಮಾಡಬೇಕೆಂದರೂ ರೈತರಿಗೆ ತಾಂತ್ರಿಕ ಬಿಕ್ಕಟ್ಟಿನಿಂದ ರೈತ ನೋಂದಕೊಂಡಿದ್ದಾನೆ.
ಹೆಸರು ಖರೀದಿಗೆ ಅವಕಾಶ:
ಸದ್ಯಕ್ಕೆ ಹೆಸರು ಧಾನ್ಯ ಖರೀದಿಗೆ ಮಾತ್ರ ಅವಕಾಶ ನೀಡಿದ ಸರ್ಕಾರ ಉದ್ದು, ಸೂರ್ಯಕಾಂತಿ ಮತ್ತು ಸೋಯಾ ಬೆಳೆ ಖರೀದಿಗೆ ಇನ್ನೂ ಅನುಮತಿ ನೀಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಉತ್ಪಾದನೆ ಗುರಿ: ತಾಲೂಕಿನಲ್ಲಿ ಉದ್ದು 6550 ಹೆಕ್ಟೇರ್‍ನಲ್ಲಿ 5240 ಟನ್ ಉತ್ಪಾದನೆ ಅಂದಾಜು ಗುರಿ ಹೊಂದಿದೆ. ಹೆಸರು 2550 ಹೆಕ್ಟೇರ್‍ನಲ್ಲಿ 1913 ಟನ್ ಉತ್ಪಾದನೆ, ಮತ್ತು ನೀರಾವರಿ ಹೆಸರು 50 ಹೆಕ್ಟೇರ್‍ನಲ್ಲಿ 50ಟನ್, ಉತ್ಪಾದನೆ ಗುರಿ ಹೊಂದಿದೆ. ಈಗಾಗಲೇ ಶೇ 30ರಷ್ಟು ರೈತರು ಹೆಸರು ರಾಶಿ ಕೈಗೊಂಡಿದ್ದಾರೆ. ಉಳಿದವರು ರಾಶಿಗೆ ಮುಂದಾಗಿದ್ದು ಎಡ್ಮೂರು ದಿನಗಳಿಂದ ಮಳೆ ಅಡ್ಡಿಯಾಗಿದೆ. ಈ ನಡುವೆ ಹೆಸರು ಬೆಳೆದವರು ಮಾರಾಟಕ್ಕೆ ಮುಂದಾದರೆ ಅಲ್ಲೂ ಸಹ ತಾಂತ್ರಿಕತೆ ಅಡ್ಡಿಯಿಂದ ಪರದಾಡುವಂತೆ ಮಾಡಿದೆ.
ತಾಂತ್ರಿಕತೆ ನಿವಾರಣೆಗೆ ಒತ್ತಾಯ:
ನೆರವಾಗಿ ಖರೀದಿಗೆ ಅವಕಾಶಬೇಕು: ಬೆಳೆ ದರ್ಶಕ ಆ್ಯಫ್‍ನಲ್ಲಿ ರೈತರ ಬೆಳೆ ನೋಂದಣಿ ಇಲ್ಲದಕ್ಕೆ ಕೇಂದ್ರಗಳಲ್ಲಿ ಖರೀದಿಗೆ ತೊಂದರೆ ಆಗಿದೆ. ಹೀಗಾಗಿ ಹೆಸರು ಬೆಳೆದ ರೈತರ ಧಾನ್ಯವನ್ನು ನೇರವಾಗಿ ಖರೀದಿಗೆ ಸರ್ಕಾರ ಅವಕಾಶ ನೀಡಬೇಕು. ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಸರ್ವೇ ಕೈಗೊಂಡು ಈ ಹಿಂದೆ ಅಫ್‍ಲೋಡ ಆಗಿದ್ದರೆ ಖರೀದಿ ಕೇಂದ್ರಗಳಿಗೆ ನೀಡಿದ ಆ್ಯಫ್‍ನಲ್ಲೂ ತೋರಿಸುತ್ತಿತ್ತು. ಆದರೆ ಎಲ್ಲೂ ಸಹ ಬೆಳೆ ಸಮೀಕ್ಷೆ ಆಗದೇ ಇರುವುದು ಖರೀದಿಗೆ ಅಡ್ಡಿಯಾಗಿದೆ.
ಈ ನಡುವೆ ಹೆಸರು ಖರೀದಿಗೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಆದರೆ ಬೆಳೆ ಸಮೀಕ್ಷೆಯಲ್ಲಿ ರೈತರ ಬೆಳೆ ನೋಂದಣಿಯಿಲ್ಲ. ಖರೀದಿ ಕೇಂದ್ರಗಳಿಗೆ ನೀಡಿದ ಖರೀದಿ ಆ್ಯಪ್‍ನಲ್ಲಿ ಬೆಳೆ ಸಮೀಕ್ಷೆ ವರದಿ ಕೇಳುತ್ತಿದೆ. ವರದಿಯಿಲ್ಲದಕ್ಕೆ ಖರೀದಿಗೆ ತೊಂದರೆ ಆಗಿದೆ. ಇದರಿಂದ ರೈತರು ತಮ್ಮ ಹೆಸರು ಮಾರಾಟಕ್ಕೆ ವಂಚಿತರಾಗಿದ್ದಾರೆ. ಕೂಡಲೇ ಬೆಳೆ ಸಮೀಕ್ಷೆ ನಡೆಸಿ ವರದಿ ದಾಖಲಿಸಿದರೆ ಖರೀದಿಗೆ ಅನುಕೂಲವಾಗುತ್ತದೆ. ಇಲ್ಲ ಸಮೀಕ್ಷಾ ವರದಿ ಕಾಲಂ ರದ್ದುಗೊಳಿಸಿ ನೇರವಾಗಿ ಖರೀದಿಗೆ ಅವಕಾಶ ಮಾಡಿಕೊಡಬೇಕು.
ಬೆಳೆ ಸಮಿಕ್ಷೆ ನಡೆದಿದೆ:
ಇನ್ನೂ ಖರೀದಿ ಆರಂಭಗೊಂಡಿಲ್ಲ. ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದರಿಂದ ವಿಳಂಭವಾಗಿದೆ. ಬೆಳೆ ಸಮಿಕ್ಷೆ ಪ್ರಕ್ರಿಯೆ ನಡೆದಿದೆ. ಬೆಳೆ ಸಮೀಕ್ಷೆ ಕಾರ್ಯಕ್ಕೆ ಎರಡು ಆ್ಯಪ್‍ಗಳಿವೆ. ಒಂದು ಪಿಆರ್‍ಗಳ ಮೂಲಕ ಮಾಡಲಾಗುತ್ತಿದೆ. ಇಲ್ಲಿ ಸಮೀಕ್ಷೆಯಿಂದ ಹೊರಗುಳಿದ್ದಿದ್ದರೆ, ಇನ್ನೊಂದು ಆ್ಯಪ್ ರೈತರು ತಾವೇ ಮಾಡಿಕೊಳ್ಳಬಹುದು. ಬೆಳೆ ಸಮೀಕ್ಷೆ ಪ್ರಕ್ರಿಯೆಯಲ್ಲಿದೆ.
ಶರಣಗೌಡ ಪಾಟೀಲ ಸಹಾಯಕ ಕೃಷಿ ನಿರ್ದೇಶಕರು ಆಳಂದ.