ಖಜೂರಿ ವಲಯ ಶಾಲೆಗಳಲ್ಲಿ ಅಡುಗೆ ಸಿಲಿಂಡರ್ ಅಭಾವ
ಆಳಂದ:ಸೆ.3: ಖಜೂರಿ ವಲಯದಲ್ಲಿ ಬರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಲಿಂಡರ್‍ಗಳನ್ನು ಸರಿಯಾಗಿ ವಿತರಿಸದ ಕಾರಣ, ಈ ಶಾಲೆಗಳಲ್ಲಿ ಸೌದೆ ಮುಖಾಂತರ ಅಡುಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ದೂರು ಕೇಳಿಬಂದಿದೆ.
ಅಡುಗೆ ಗ್ಯಾಸ್ ಪೂರೈಕೆ ಕೊರತತೆಯಿಂದಾಗಿ ಬಯಲಲ್ಲೆ ಸೌದೆ ಒಲೆಯ ಮೇಲೆ ಶಾಲಾ ಬಿಸಿಯೂಟ ತಯಾರಿಸಲು ಅಡುಗೆ ಸಹಾಯಕರು ಹರಸಹಾಸ ಪಡುತ್ತಿದ್ದಾರೆ.
ತಡಕಲ್ ಗ್ರಾಮದಲ್ಲಿನ ಬಸವ ಸಮಿತಿ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಸೇರಿ ಹಲವು ಶಾಲೆಗಳಲ್ಲಿ ಗ್ಯಾಸ್ ಸಿಲಿಂಡರ್‍ಗಳು ಕಳೆದ ಒಂದು ತಿಂಗಳಿಂದ ಇಲ್ಲದ ಕಾರಣ, ಶಾಲಾ ಬಿಸಿಯೂಟ ತಯಾರಿಕೆಗೆ ತೊಂದರೆ ಎದುರಾಗಿದೆ.
ಬಂಗರಗಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಅಡುಗೆ ಅನಿಲ ಖಾಲಿಯಾಗಿದ್ದು, ಸಂಬಂಧಪಟ್ಟ ಗ್ಯಾಸ್ ವಿತರಕರಿಗೆ ಸಂಪರ್ಕಿಸಿದರೂ ಕೂಡ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಮತ್ತೊಂದಡೆ ಖಜೂರಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳಿಗೆ ಸುಮಾರು ದಿನಗಳಿಂದ ಗ್ಯಾಸ್ ಸಿಲಿಂಡರ್ ವಿತರಿಸದೇ ಇರುವ ಕಾರಣ ಖಜೂರಿ ವಲಯದಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಸೌದೆ ಮುಖಾಂತರ ಅಡಿಗೆ ಮಾಡುತ್ತಿದ್ದಾರೆ ಮಳೆಯಲ್ಲಿ ಅಡಿಗೆ ಮಾಡುವುದರಿಂದ ತುಂಬಾ ತೊಂದರೆಯಾಗುತ್ತಿದೆ ಮೇಲಾಧಿಕಾರಿಗಳು ಇವರ ಮೇಲೆ ಕ್ರಮ ಜರುಗಿಸಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ನಮ್ಮ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಗಂಗಾಧರ ಕುಂಬಾರ ಒತ್ತಾಯಿಸಿದ್ದಾರೆ.
ಈಗಾಗಲೇ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಮನವಿ ನೀಡಿ ಒತ್ತಾಯಿಸಿದ್ದು, ಆದರೆ ಈ ಕುರಿತು ಅಧಿಕಾರಿಗಳಿಂದ ನಿವಾರಣೆಯಾಗಿಲ್ಲ. ಈಗಲಾದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿ ಪರಿಹಾರವಾಗದಿದ್ದರೆ, ಎಲ್ಲಾ ಶಾಲೆಗಳ ಶಾಲಾ ಸಿಬ್ಬಂದಿ ಮತ್ತು ಸ್ಥಳೀಯರು ಬೀದಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಗಂಗಾಧರ ಕುಂಬಾರ ಎಚ್ಚರಿಸಿದ್ದಾರೆ.