ಗಾಂಜಾ ಮೋಜಿಗೆ ಕಳವು ಆರೋಪಿ ಸೆರೆ
ಬೆಂಗಳೂರು,ಸೆ.೩-ಮಾದಕ ವ್ಯಸನದ ಜೊತೆ ವಿಲಾಸಿ ಜೀವನ ನಡೆಸಲು ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ ೪೩ಕ್ಕೂ ಹೆಚ್ಚು ಅಪರಾಧಗಳಲ್ಲಿ ಬೇಕಾಗಿದ್ದ ಕುಖ್ಯಾತ ಕಳ್ಳನನ್ನು ಜೆಪಿನಗರ ಪೊಲೀಸರು ಬಂಧಿಸಿ ೯ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ.
ಜೆಪಿನಗರದ ಫರ್ವೇಜ್ ಬಂಧಿನ ಕಳ್ಳನಾಗಿದ್ದು,ಹಿಂದೆ ಕೂಡ ಕಳ್ಳತನ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವ ಈತನಿಂದ ೯ ಲಕ್ಷ ಮೌಲ್ಯದ ೧೦೯.೮ ಗ್ರಾಂ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೆ.ಪಿ.ನಗರದ ಮಾರೇನಹಳ್ಳಿಯಲ್ಲಿ ಕಳೆದ ಆ.೧೪ ರಂದು ರಾತ್ರಿ ೯ರ ವೇಳೆ ಕಿಟಕಿಯ ಬಾಗಿಲನ್ನು ತೆರೆದು ಮಲಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಕಿಟಕಿಯ ಮೂಲಕ ಕೈ ಹಾಕಿ ಪ್ರಯತ್ನಿಸಿದ್ದು,ಸರ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧದಷ್ಟು ಚಿನ್ನದ ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಜೆಪಿನಗರ ಇನ್ಸ್‌ಪೆಕ್ಟರ್ ರಾಧಾಕೃಷ್ಣ ಮತ್ತವರ ತಂಡ ಖಚಿತವಾದ ಮಾಹಿತಿ ಆಧರಿಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ೬೦ ಗ್ರಾಂ ಚಿನ್ನದ ಚೈನ್ ಬೈಕ್ ವಶಕ್ಕೆ ಪಡೆದು ಸುದೀರ್ಘವಾಗಿ ವಿಚಾರಣೆ ನಡೆಸಿ ಆರೋಪಿಯು ೨೯.೮ ಗ್ರಾಂ ಚಿನ್ನದ ಚೈನ್‌ನ್ನು ಗೋಲ್ಡ್ ಪಾಲಿಷ್ ಮಾಡುವ ವ್ಯಕ್ತಿಗೆ ನೀಡಿದ್ದನ್ನು ಹಾಗೂ ಸ್ನೇಹಿತನಿಗೆ ನೀಡಿದ್ದ ೨೦ ಗ್ರಾಂ ಚಿನ್ನದ ಚೈನನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಪತ್ನಿ,ಇಬ್ಬರು ಮಕ್ಕಳು ಹಾಗೂ ತನ್ನ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು,೭ ನೇತರಗತಿ ಓದಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಕಳ್ಳತನದ ಚಾಳಿಗೆ ಬಿದ್ದ ಈತನ ವಿರುದ್ಧಜೆಪಿ ನಗರ, ಕೋರಮಂಗಲ, ಮೈಕೋ ಲೇಔಟ್, ಜಯನಗರ, ಬಸವನಗುಡಿ, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಡೆಕಾಯಿತಿ,ಕನ್ನಕಳವು, ಮನೆಯಲ್ಲಿ ಕಳವು ಹಾಗೂ ಗಾಂಜಾ ಪ್ರಕರಣಗಳು ಸೇರಿದಂತೆ ಒಟ್ಟು ೪೩ ಪ್ರಕರಣಗಳು ದಾಖಲಾಗಿವೆ. ಮಧ್ಯಪಾನ, ಗಾಂಜಾ ಸೇವನೆಯ ಚಟ ಹೊಂದಿ ಪಬ್, ಬಾರ್ & ರೆಸ್ಟೋರೆಂಟ್ ಗೆ ಹೋಗಿ ಮೋಜು ಮಸ್ತಿಮಾಡಿ ವಿಲಾಸಿ ಜೀವನ ಮಾಡಲು ಕಳ್ಳತನಕ್ಕೆ ಇಳಿದಿರುವುದು ತನಿಖೆಯಲ್ಲಿ ಕಂಡುಬಂದಿದೆ,ಆರೋಪಿಯನ್ನು ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ರಾಧಾಕೃಷ್ಣ ಮತ್ತವರ ತಂಡ ಬಂಧಿಸಿದೆ ಎಂದು ಕಮೀಷನರ್ ತಿಳಿಸಿದರು.