ಮಹನೀಯರ ತತ್ವಾದರ್ಶಗಳನ್ನು ಪಾಲಿಸಬೇಕು; ಪ್ರಶಾಂತ್ ಮೂಲೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.03: ಜೀವನದಲ್ಲಿ ಸಾಧನೆಯ ಶಿಖರವೇರಲು ಪ್ರತಿಯೊಬ್ಬರೂ ಸಹ ಮಹನೀಯರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಜಿಂದಾಲ್ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಪ್ರಶಾಂತ್ ಮೂಲೆ  ಹೇಳಿದರು.
ತೋರಣಗಲ್ಲಿನ ಜಿಂದಾಲ್ ಆದರ್ಶ ವಿದ್ಯಾಲಯ ಶಾಲೆಯಲ್ಲಿ  ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯ ಜಯಂತಿ ಅಂಗವಾಗಿ  ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿ ಜಯಂತಿ ನಿಮಿತ್ತವಾಗಿ ರಾಷ್ಟ್ರಾದ್ಯಂತ ಸ್ವಚ್ಛತಾ ಸೇವಾ ಘೋಷವಾಕ್ಯದೊಂದಿಗೆ ಸ್ವಭಾವ-ಸ್ವಚ್ಛತಾ ಸಂಸ್ಕಾರ-ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು, ಶಿಕ್ಷಕರೂ, ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆಂದರು.
ಶಿಕ್ಷಕರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡು, ಗ್ರಾಮದ  ಶಂಕರಗುಡ್ಡ ಪ್ರದೇಶದಲ್ಲಿರುವ ಮನೆಗಳಿಗೆ ತೆರಳಿ ಜನಸಾಮಾನ್ಯರಿಗೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿ, ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೇಗೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ತದನಂತರ ಮನೆಗಳಲ್ಲಿರುವ ನಿರುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯವನ್ನು ಚೀಲಗಳಲ್ಲಿ ಸಂಗ್ರಹಿಸಿ ಕಸ ವಿಲೇವಾರಿ ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿವಿಧ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದು ಜನಸಾಮಾನ್ಯರಿಗೆ ಸ್ವಚ್ಛತೆಯ ಪ್ರಾಮುಖ್ಯತೆ ಸಾರಿದ್ದು ವಿಶೇಷವಾಗಿತ್ತು.
ಶಾಲೆಯ  ಮುಖ್ಯೋಪಾಧ್ಯಾಯನಿ   ಭಾಗ್ಯವತಿ ಗಾಜುಲ ಸೇರಿದಂತೆ ಸಂಯೋಜಕರು, ಸಫಲ್ ಸಮಿತಿ ಸದಸ್ಯರು, ಶಿಕ್ಷಕರೂ, ಹಾಗೂ ಸಿಬ್ಬಂದಿ ವರ್ಗ ಮತ್ತು ಇತರರು ಭಾಗವಹಿಸಿದ್ದರು.