ಬಸ್ ಚಾಲಕರು, ನಿರ್ವಾಹಕರು ಸಾರ್ವಜನಿಕರ ವಿಶ್ವಾಸಗಳಿಸಲು ಕರೆ
ಹೊಸಪೇಟೆ (ವಿಜಯನಗರ) ಸೆ3: ಸಾರಿಗೆ ಇಲಾಖೆಗೆ ಸಾರ್ವಜನಿಕರೇ ಅವಿಭಾಜ್ಯ ಅಂಗ. ಪ್ರತಿನಿತ್ಯ ಸಂಚರಿಸುವ ಅಸಂಖ್ಯೆ ಸಾರ್ವಜನಿಕರು, ಬಸ್ ಚಾಲಕರು ಮತ್ತು ನಿರ್ವಾಹಕರ ಮೇಲೆ ಇಟ್ಟಿರುವ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮಾನ ಎ.ನಂದಗಡಿ ಅವರು ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಾಹಕರಿಗೆ ಸಲಹೆ ನೀಡಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹೊಸಪೇಟೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 1ರಂದು ಹೊಸಪೇಟೆಯ ಕೆ.ಎಸ್.ಆರ್.ಟಿ.ಸಿ ಘಟಕದಲ್ಲಿ ನಡೆದ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯು ಸಾರ್ವಜನಿಕರನ್ನು ಒಂದಡೆಯಿಂದ ಮತ್ತೊಂದೆಡೆಗೆ ಸೇರಿಸುವ ಸಂಪರ್ಕ ಕೊಂಡಿಯಾಗಿದೆ. ಇಂತಹ ಸಾರಿಗೆ ಇಲಾಖೆಯು ಆರಂಭದಿಂದ ಶಿಸ್ತ್ತು, ಸಂಯಮ ಪಾಲಿಸುತ್ತಾ ಬಂದಿದ್ದು, ಅದನ್ನು ಇನ್ನಷ್ಟು ಹೆಚ್ಷಿಸಿಕೊಂಡಲ್ಲಿ ಅಪವಾದಗಳು ದೂರವಾಗಲಿವೆ ಎಂದು ತಿಳಿಸಿದರು. ಚಾಲಕರ ಕೆಲಸವನ್ನು ಮೆಚ್ಚಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಯಾವುದೇ ಘಟಕದಲ್ಲಿನ ಒಬ್ಬ ಚಾಲಕ ಪ್ರಶಸ್ತಿ ಪಡೆದರೆ ಇಡೀ ಘಟಕವೇ ಸಾಧನೆ ಮಾಡಿದಂತೆ ಇತರರಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಒಂದಿಲ್ಲೊಂದು ತೊಂದರೆ ತಾಪತ್ರಯಗಳು ಇದ್ದೇ ಇರುತ್ತವೆ. ಇದನ್ನು ಪ್ರತಿಯೊಬ್ಬರು ಅರಿಯಬೇಕು. ಯಾವುದೇ ತೊಂದರೆಗಳು ಎದುರಾದಾಗ ಸಂಯಮ ಕಳೆದುಕೊಳ್ಳಬಾರದು. ಸಾವಧಾನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಚಾಲಕರು ಮತ್ತು ನಿರ್ವಾಹಕರಿಗೆ ಶಿಸ್ತು ಅಂದರೆ ಏನು ಎಂಬುದು ತಿಳಿದಿರುತ್ತದೆ. ವಾಹನ ಹೋಗುತ್ತಿರುವಾಗ ಎಲ್ಲೆಂದರಲ್ಲಿ ವಾಹನ ನಿಲ್ಲ್ಲಿಸಬಾರದು. ಬಸ್‌ನಲ್ಲಿ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೊಂದಿಗೂ ಸಾವಧಾನದಿಂದ ವರ್ತಿಸಬೇಕು. ಯಾರೊಂದಿಗೂ ಅಸಭ್ಯವಾಗಿ ವರ್ತಿಸಬಾರದು. ಏರುಧ್ವನಿಯಲ್ಲಿ ಮಾತನಾಡಬಾರದು. ನಮ್ಮ ವರ್ತನೆ ಇತರರಿಗೆ ಮಾದರಿಯಾಗುವ ಹಾಗೆ ಇರಬೇಕು ಎಂಬುದನ್ನು ಪ್ರತಿಯೊಬ್ಬ ಚಾಲಕರು ಮತ್ತು ನಿರ್ವಾಹಕರು ಅರಿಯಬೇಕು ಎಂದು ಸಲಹೆ ಮಾಡಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಅಶೋಕ ಆರ್.ಹೆಚ್. ಅವರು ಮಾತನಾಡಿ, ಸಾರಿಗೆ ಸಂಸ್ಥೆಯು 1948ರಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಲ್ಲಿಯವರೆಗ ಅಪಾರ ಸಾಧನೆ ಮಾಡುತ್ತಾ ಬಂದಿದೆ. ದೇಶದ ಬೆಳವಣಿಗೆಯಲ್ಲಿ ಸಾರಿಗೆ ಸಂಸ್ಥೆಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಸಾರಿಗೆ ಸಂಸ್ಥೆಯ ಭಾಗವಾಗಿರುವ ನೀವುಗಳು ಯಾವಾಗಲು ಸಾರ್ವಜನಿಕರ ಹಿತಬಯಸುತ್ತ ಅದರಲ್ಲಿ ನೆಮ್ಮದಿ, ಸುಖ, ಶಾಂತಿ, ಸಾಧನೆ, ಸೇವಾಮನೋಭಾವದಿಂದ ಬಾಳಬೇಕು ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಅಪಘಾತಗಳ ಪ್ರಮಾಣವು ಹೆಚ್ಚುತ್ತಿದೆ. ಇದು ವಿಷಾಧದ ಸಂಗತಿಯಾಗಿದೆ. ಪ್ರತಿನಿತ್ಯ ಬಸ್ ಏರಿ ವಾಹನ ನಡೆಸುವ ಚಾಲಕರು ಮತ್ತು ನಿರ್ವಾಹಕರು ಕಾನೂನು ಜ್ಞಾನ ಪಡೆದುಕೊಳ್ಳಲೇಬೇಕು. ಹೊಸದಾಗಿ ರೂಪಿತವಾಗುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂಕಟದ ಪರಿಸ್ಥಿತಿಯಲ್ಲಿ ಕಾನೂನುಜ್ಞಾನವೇ ನಮಗೆ ದಾರಿದೀಪವಾಗಲಿದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು. ಅಪಘಾತಗಳು ಸಂಭವಿಸಿದಾಗ ಗಾಯಗೊಂಡ ವ್ಯಕ್ತಿಗಳಿಗೆ ಮೊದಲನೇಯದಾಗಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಬೇಕು. ಆನಂತರ ಹತ್ತಿರದ ಪೊಲೀಸ್ ಠಾಣೆಗೆ ಕೂಡಲೇ ವಿಷಯ ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ತಾಲೂಕಿನ ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹೇಮಲತಾ. ಬಿ. ಹುಲ್ಲೂರ, ಗೌರವಾನ್ವಿತ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ್ ಬಾಬು ಬಿ.ಎನ್., ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಪ್ರಶಾಂತ್ ನಾಗಲಾಪುರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ತಿಮ್ಮಾರೆಡ್ಡಿ ಹೀರಾ, ಆರ್‌ಟಿಓ ವಸಂತ ಚವ್ಹಾಣ್, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಲಕನ್ ಆರ್ ಮಸುಗುಪ್ಪಿ, ಅಭಿಯಂತರರಾದ ದಾಸರಿ ರಾಧಕೃಷ್ಣ, ರಾಜಶೇಖರ ವಾಜಂತ್ರಿ ಇವರು ಉಪಸ್ಥಿತರಿದ್ದರು.
