ಬಿಜೆಪಿ ಪ.ಪಂ. ಸದಸ್ಯನ ಅಪಹರಣ ಖಂಡಿಸಿ ಪ್ರತಿಭಟನೆ
ಚನ್ನಮ್ಮನ ಕಿತ್ತೂರು, ಸೆ 3: ಸ್ಥಳೀಯ ಪಪಂಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯ ಹಿನ್ನೆಲೆ ಸಂಖ್ಯಾ ಬಲ ಹೆಚ್ಚಿಸಲು 2ನೇ ವಾರ್ಡಿನ ಬಿಜೆಪಿ ಸದಸ್ಯ ನಾಗರಾಜ ಅಸುಂಡಿಯವರನ್ನು ಅಪಹರಿಸಿದ್ದು ಖಂಡನೀಯ ಎಂದು ಕಿತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಇದರ ನೇತೃತ್ವ ವಹಿಸಿಕೊಂಡಿದ್ದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಪಪಂ ಬಿಜೆಪಿ ಸದಸ್ಯನನ್ನು ಅಪಹರಿಸಿ ಅಧಿಕಾರದ ಗದ್ದುಗೆ ಏರಬೇಕೆಂದು ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಭಾಗಿಯಾದವರನ್ನು ತಕ್ಷಣವೇ ಬಂಧಿಸಬೇಕು. ಅಧಿಕಾರಿಗಳು ನಮ್ಮ ಸದಸ್ಯನನ್ನು ಕರೆತರಬೇಕು, ಇಲ್ಲದಿದ್ದರೆ ಚುನಾವಣೆ ಮುಂದೂಡಬೇಕು ಎಂದು ಪಟ್ಟು ಹಿಡಿದು ಆಗ್ರಹಿಸಿದರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ ಮಾತನಾಡಿ, ಬಿಜೆಪಿ ಸದಸ್ಯ ನಾಗರಾಜ ಅಸುಂಡಿಯವರನ್ನು ಅಪಹರಣ ಮಾಡುವುದು ತುಂಬಾ ಖೇದಕರ ಎಂದರು.
ಪ್ರಾಸ್ತಾವಿಕವಾಗಿ ಲಕ್ಷ್ಮೀ ಇನಾಮದಾರ, ಸೋನಾಲಿ ಸರ್ನೋಬತ್ತ್, ಶ್ರೀಮತಿ ಮಿಶ್ರಾ, ಇನ್ನೂ ಅನೇಕರು ಮಾತನಾಡಿದರು.
ಈ ವೇಳೆ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಮಾಜಿ ಶಾಸಕರುಗಳು ವಿಶ್ವನಾಥ ಪಾಟೀಲ, ಜಗದೀಶ ಮೆಟ್ಟಗುಡ್ಡ, ಪ್ರಮೋದ ಕೊಚೇರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಶ್ರೀಕರ ಕುಲಕರ್ಣಿ, ಉಳವಪ್ಪಾ ಉಳ್ಳಾಗಡ್ಡಿ ಸೇರಿದಂತೆ ವಿವಿಧ ತಾಲೂಕಿನ ಬಿಜೆಪಿ-ಜಿಲ್ಲಾ-ತಾಲೂಕಾ ಘಟಕಗಳ ಅಧ್ಯಕ್ಷ-ಉಪಾಧ್ಯಕ್ಷ, ಕಾರ್ಯದರ್ಶಿ, ಯುವಮೊರ್ಚಾ, ಮುಖಂಡರು, ಕಾರ್ಯಕರ್ತರಿದ್ದರು.