ಸೆಪ್ಟೆಂಬರ್12ಕ್ಕೆ ಅಧ್ಯಕ್ಷ ಉಪಾಧ್ಯಕ್ಷ ರ ಚುನಾವಣೆತೆರೆಯ ಮರೆ ಮರೆಯ ಕಸರತ್ತು ಜೋರು.
ಅನಂತ ಜೋಶಿ
ಹೊಸಪೇಟೆ (ವಿಜಯನಗರ)ಸೆ 3: ಹೊಸಪೇಟೆ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ, ತೆರೆಮರೆಯ ಕಸರತ್ತು ಜೋರಾಗಿದೆ.
ಬಿಜೆಪಿಯ ರೂಪೇಶ ಸೇರಿದಂತೆ ಕಾಂಗ್ರೆಸ್‌ನ ಅಸ್ಲಾಂ ಮಾಳ್ಗಿ, ಕೆ.ಮಹೇಶ ಇವರು ಅಧ್ಯಕ್ಷರಾಗುವ ಕಸರತ್ತು ನಡೆಸುತ್ತಿದ್ದು ಮಾಜಿ ಸಚಿವ ಆನಂದಸಿಂಗ್ ಒಲವುತೋರುವ ಅಭ್ಯರ್ಥಿ ಅಧ್ಯಕ್ಷ ಉಪಾಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದ್ದು, ಶಾಸಕ ಎಚ್‌.ಆರ್‌. ಗವಿಯಪ್ಪ ಅವರ ನಡೆ ಮತ್ತು ನಿಲುವು ನಿಗೂಢವಾಗಿದೆ. ಶಾಸಕರಿಂದಲೇ ಚುನಾವಣೆ ವಿಳಂಬವಾಗಿದೆ ಎಂದು ಹೇಳಿ ಅವರ ಮೇಲೆನೆ  ಗೂಬೆ ಕುಡಿಸುವ’  ತಂತ್ರವೂ ಹಲವು ವಲಯಗಳಿಂದ ನಡೆಯುತ್ತಿದೆ ಎನ್ನಲಾಗಿದೆ. ‘ಚುನಾವಣೆ ಬೇಗ ನಡೆಯಲಿ ಎಂದು ನಾನೂ ಹಾರೈಸುತ್ತೇನೆ. ನಾನು ನಗರಸಭೆ ಚುನಾವಣೆಯ ತಂಟೆಗೇ ಬರುತ್ತಿಲ್ಲ, ಯಾರು ಬೇಕಾದರೂ ಅಧ್ಯಕ್ಷರಾಗಲಿ, ನನಗೆ ಅದು ಸಂಬಂಧವೇ ಇಲ್ಲ. ನಾನಂತೂ ಈ ಚುನಾವಣೆಯಿಂದ ದೂರವೇ ಉಳಿದಿರುತ್ತೇನೆ’ ಎಂದು ಶಾಸಕರು  ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಅಧ್ಯಕ್ಷರು ಮುಸ್ಲಿಂ ಸಮುದಾಯದವರು, ಜಿಲ್ಲಾ ಉಸ್ತುವಾರಿ ಸಚಿವರು, ಹುಡಾ ಅಧ್ಯಕ್ಷರು ಸಹ ಮುಸ್ಲಿಂ ಸಮುದಾಯದವರು. ನಗರಸಭೆಗೆ ಸಹ ಮುಸ್ಲಿಂ ಸಮುದಾಯದವರು ಅಧ್ಯಕ್ಷರಾದರೆ ತಪ್ಪು ಸಂದೇಶ ಹೋಗುವ ಅಪಾಯ ಇದೆ, ಹೀಗಾಗಿ ಬೇರೆ ಅಭ್ಯರ್ಥಿಗೆ ಅವಕಾಶ ಕೊಡಿ ಎಂಬ ಕ್ಷೀಣ ಧ್ವನಿ ಕೇಳಿಸಿದರೂ ಅದನ್ನು ಮಟ್ಟಹಾಕುವ ಕೆಲಸ ಈಗಾಗಲೇ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈಗಾಗಲೇ 12 ಮಂದಿ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಸಂಸದ ಮತ್ತು ಶಾಸಕರ ಬಲವೂ ಇದೆ. 12 ಮಂದಿ ಪಕ್ಷೇತರರು ಮತ್ತು ಒಬ್ಬ ಎಎ‍ಪಿ ಸದಸ್ಯರ ಪೈಕಿ ಸುಮಾರು 5 ಮಂದಿ ಈಗಾಗಲೇ ಕಾಂಗ್ರೆಸ್‌ಗೆ ಒಲವು ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 11ಸಂಖ್ಯಾಬಲವಿದ್ದರೂ ಬಹುತೇಕರು ಸ್ವತಂತ್ರ ಸದಸ್ಯರು ಬಿಜೆಪಿ ಸೇರಿಕೊಂಡಿದ್ದು ಮೇಲನೋಟಕ್ಕೆ ಏನೇ ಕಂಡರು ಮಾಜಿ ಸಚಿವ  ಆನಂದಸಿಂಗ್ ಆಸಕ್ತಿ ತೊರುವ ಸದಸ್ಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಈ ಮಧ್ಯೆ, ಕಾಂಗ್ರೆಸ್ ಪಕ್ಷದ ವೀಕ್ಷಕ ವಿಜಯ್‌ ಸಿಂಗ್ ಮತ್ತು ಆನಂದ ನ್ಯಾಮಗೌಡ ಅವರು ಚುನಾವಣೆ ಸಂಬಂಧ ಇತ್ತೀಚಿಗೆ ಸಭೆ ನಡೆಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಅಂತಿಮ ಗೊಳಿಸಿದಾರಾದರೂ ಪರಿಸ್ಥಿತಿಯನ್ನು ಅರಿತು ನಡೆಯುವ, ಸರ್ಕಾರಕ್ಕೆ ಮುಚುಗುರವಾಗದಂತೆ ನಡೆಯಲು ಮದಾಗಲಿದ್ದಾರೆ ಎನ್ನಲಾಗುತ್ತಿದೆ.
‘ಚುನಾವಣೆ ಯಾವಾಗ ನಡೆಯುತ್ತದೆ ಎಂದು ಎರಡು ದಿನದ ಮೊದಲು ತಿಳಿಸಿದರು, ನಾನು ಬರುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ. ಶಾಸಕ ಗವಿಯಪ್ಪ ಅವರಿಂದ ಇದುವರೆಗೂ ಸ್ಪಷ್ಟ ಉತ್ತರ ಬಂದಿಲ್ಲ,  ಕಳೆದ ಬಾರಿ ಗೆದ್ದವರಿಂದ ನಗರದ ಅಭಿವೃದ್ಧಿ ಆಗಿಲ್ಲ ಎಂಬ ಬೇಸರ ಎಲ್ಲೆಡೆ ಇದೆ, ಹೀಗಾಗಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಪ್ರಯತ್ನದ ಹೊರತಾಗಿಯೂ ಕಾಂಗ್ರೆಸ್ ಈ ಬಾರಿ ನಗರಸಭೆಯ ಹಿಡಿತ ಸಾಧಿಸುವ ವಿಶ್ವಾಸ ಇದೆ’
ವೀಕ್ಷಕರು ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಹೊರತಾಗಿಯೂ ಜಿಲ್ಲಾದ್ಯಕ್ಷರ ಇಂದು ಸಂಜೆ ಮತ್ತೊಂದು ಸುತ್ತಿನ ಸದಸ್ಯರ ಸಭೆನಡೆಸಿ ಒಮ್ಮೊತದ ಅಭ್ಯರ್ಥಿ ಆಯ್ಕೆ ಮಾಡಿ ಹೊಸಪೇಟೆ ನಗರಾಭಿವೃದ್ಧಿಗೆ ಮುಂದಾಗುತ್ತೇವೆ
ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌ ತಿಳಿಸಿದರು.
‘ನಾನು ಮತ ಚಲಾಯಿಸಲೂ ಬರುವುದಿಲ್ಲ’
‘ನಗರಸಭೆ ಒಂದು ಸ್ವತಂತ್ರ ಅಂಗಸಂಸ್ಥೆ. ಅದರಲ್ಲಿ ಶಾಸಕರ ಹಸ್ತಕ್ಷೇಪ ಅನಗತ್ಯ. ಹೀಗಾಗಿ ಚುನಾವಣೆಯಲ್ಲಿ ನಾನು ಮತ ಚಲಾಯಿಸಬೇಕೆಂದೇನೂ ಇಲ್ಲ. ಸಂಸದರು ಮತ ಚಲಾಯಿಸಿದರೆ ಅದು ಅವರ ಇಷ್ಟ. ಪಕ್ಷ ಹೇಳಿದರೂ ನಾನು ಮತ ಚಲಾಯಿಸಲು ಬರುವುದಿಲ್ಲ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಖಡಾಖಂಡಿತವಾಗಿ ತಿಳಿಸಿದ್ದಾರೆ.