ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುಕ್ತ ಆಹಾರ ಸಿಗಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಸೆ.03:- ಸಮಾಜದ ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ಇಂದಿನ ತುರ್ತಾಗಿದೆ ಎಂದು ಕೊಯಂಬತ್ತೂರಿನ ಅವಿನಾಶಿಲಿಂಗಂ ಗೃಹ ವಿಜ್ಞಾನ ಸಂಸ್ಥೆಯ ಪೆÇ್ರ.ಎಸ್.ಕೌಶಲ್ಯ ತಿಳಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ)ಯಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಅಂಗವಾಗಿ ಸೋಮವಾರ ನಡೆದ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, 2030ರ ವೇಳೆಗೆ ಎಲ್ಲ ರಂಗದಲ್ಲೂ ಸುಸ್ಥಿರ ಅಭಿವೃದ್ಧಿ ಸಾಧನೆಯ ಗುರಿ ಇದ್ದು, ಈ ನಿಟ್ಟಿನಲ್ಲಿ ವಿಶ್ವದ ರಾಷ್ಟ್ರಗಳು ಶ್ರಮಿಸುತ್ತಿವೆ. ಆದ್ದರಿಂದ ಅಪೌಷ್ಟಿಕತೆಯನ್ನು ದೂರ ಮಾಡಿ ಸರ್ವರಿಗೂ ಪೆÇೀಷಕಾಂಶಯುಕ್ತ ಆಹಾರ ನೀಡುವುದರ ಮೂಲಕ ಈ ಗುರಿಯನ್ನು ತಲುಪುದಕ್ಕೆ ಮಾತ್ರ ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಗೆ ಸಂಬಂಧಿಸಿದಂತೆ ಕಾಯಿಲೆಗಳೂ ಕೂಡಾ ಹೆಚ್ಚಾಗುತ್ತಿವೆ. ಹದಿಹರಯದವರಲ್ಲೇ ಹೃದಯಾಘಾತ ಜಾಸ್ತಿಯಾಗುತ್ತಿದೆ.
ಮಧುಮೇಹವೂ ವಿಪರೀತವಾಗುತ್ತಿದೆ. ಇವುಗಳೊಂದಿಗೆ ಕ್ಯಾನ್ಸರ್, ಚರ್ಮ ಸಂಬಂಧಿ ಕಾಯಿಲೆಗಳು ಕೂಡಾ ಸೇರಿಕೊಂಡಿವೆ. ಇದಕ್ಕೆ ಕಾರಣ ಆಧುನಿಕತೆಯ ಹೆಸರಿನಲ್ಲಿ ನಮ್ಮ ಜೀವನ ಶೈಲಿ ಬದಲಾವಣೆಯಾಗಿರುವುದು. ಒತ್ತಡದಲ್ಲಿ ಕೆಲಸ ಮಾಡುತ್ತಾ ಸಮಯದ ಪರಿಜ್ಞಾನ ಇಲ್ಲದೇ ಹೊತ್ತಲದ ಹೊತ್ತಿನಲ್ಲಿ ಆಹಾರ ಸೇವೆನೆ ಮಾಡುವುದು, ನಿದ್ದೆಯ ಪ್ರಮಾಣ ಕಡಿಮೆಯಾಗಿರುವುದು ಕೂಡ ಕಾಯಿಲೆಗಳ ಆಗಮನಕ್ಕೆ ಕಾರಣವಾಗಿವೆ ಎಂದರು.
ಯುವ ಜನಾಂಗದಲ್ಲಿ ಇತ್ತೀಚಿಗೆ ಸ್ಥೂಲಕಾಯ ಹೆಚ್ಚಾಗುತ್ತಿದೆ. ಶರೀರವನ್ನು ಸಪೂರ ಮಾಡಿಕೊಳ್ಳಲು ಜಾಹೀರಾತುಗಳಲ್ಲಿ ತೋರಿಸುವ ಆಹಾರ ಪದಾರ್ಥ ಸೇವೆನೆ ಮಾಡುವುದು, ಟಾನಿಕ್‍ಗಳನ್ನು ಕುಡಿಯುವುದು.
ಇದರಿಂದ ಸ್ಥೂಲಕಾಯ ಕರಗುವುದಿಲ್ಲ. ಬದಲಾಗಿ ದೇಹದಲ್ಲಿ ಅಡ್ಡ ಪರಿಣಾಮ ಉಂಟಾಗುತ್ತದೆ. ಏಕೆಂದರೆ ದೈಹಿಕ ಚಟುವಟಿಕೆಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೇ ಶರೀರ ಸದೃಢವಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಮೋಹಕ ಜಾಹೀರಾತುಗಳ ಮೋಹಕ್ಕೆ ಬೀಳದೆ, ನಮ್ಮ ಶರೀರಕ್ಕೆ ಪೂರಕವಾಗಿರುವ ಆಹಾರವನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಗರ್ಭಿಣಿಯರಲ್ಲಿ, ಮಕ್ಕಳಲ್ಲಿ ವಿಟಮಿನ್, ಅಪೌಷ್ಟಿಕತೆಯ ಕೊರತೆ ಕಾಡುತ್ತಿದೆ. ರಕ್ತ ಹೀನತೆ ಕಾಯಿಲೆಯಂತೂ ಭಾರತದಲ್ಲಿ ಮಹಿಳೆಯರನ್ನು ಬಾಧಿಸುತ್ತಿದೆ. ಸರ್ಕಾರ ಈ ಕಾಯಿಲೆಯನ್ನು ಮುಕ್ತಗೊಳಿಸಬೇಕು ಎಂದು ಹಲವರು ಕಾರ್ಯಕ್ರಮ ಹಮ್ಮಿಕೊಂಡಿದೆ. ಹೀಗಾಗಿ ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ನೀಗಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಪ್ರಕೃತಿ ಪರಿಸರ ಹಾಗೂ ಸ್ಥಳೀಯ ಹವಾಗುಣಕ್ಕೆ ತಕ್ಕಂತೆ ಆಹಾರ ವೈವಿಧ್ಯತೆ ರೂಪಿಸಿದೆ. ಈ ಆಹಾರಗಳನ್ನೇ ಸರಿಯಾದ ವೇಳೆಗೆ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.
ದಕ್ಷಿಣ ಭಾರತದವರು ಬೆಳಗಿನ ಉಪಹಾರಕ್ಕೆ ಇಡ್ಲಿ, ದೋಸೆ, ಉಪ್ಪಿಟ್ಟು, ಶೇಂಗಾ ಚೆಟ್ನಿ, ಕಾಯಿ ಚೆಟ್ನಿ ಮುಂತಾದವುಗಳನ್ನು ಉಪಯೋಗಿಸಿಬೇಕು. ದುಬಾರಿಯಲ್ಲದ ಹಣ್ಣುಗಳು ನಮ್ಮಲ್ಲಿ ಲಭ್ಯವಿವೆ. ಸೀಬೆಹಣ್ಣು, ನೇರಳೆ, ಜಂಬೂನೇರಳೆ ಸ್ಥಳೀಯವಾಗಿ ಸಿಗುತ್ತವೆ. ಇವುಗಳನ್ನು ಹೇರಳವಾಗಿ ಸೇವನೆ ಮಾಡಿದರೆ ವಿಟಮಿನ್ ಸಿಗುತ್ತದೆ ಎಂದರು.
ಬಹುಮಾನ ವಿತರಣೆ:
ಇದೇ ಸಂದರ್ಭದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಎ.ಜಿ.ಪವಿತ್ರಾ (ಪ್ರ), ಹದಿಯಾ ತಾಹೀರ್ (ದ್ವೀ), ಅಸ್ಮಿತಾ ತನ್ವರ್ (ತೃ) ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಂ.ಪ್ರಕೃತಿ (ಪ್ರ), ದೀಪಿಕಾ (ದ್ವಿ), ಕೀರ್ತಿ (ತೃ) ಅವರಿಗೆ ಬಹುಮಾನ ವಿತರಿಸಲಾಯಿತು.
ಸಿಎಫ್‍ಟಿಆರ್‍ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಕೇಂದ್ರ ಸರ್ಕಾರದ ಬಿಐಆರ್‍ಎಸಿ ಹಿರಿಯ ತಾಂತ್ರಿಕ ವ್ಯವಸ್ಥಾಪಕಿ ಡಾ.ಪ್ರಚಿ ಅಗರವಾಲ್ ಇದ್ದರು.