ಪೌಷ್ಠಿಕ ಆಹಾರ ದಿನಾಚರಣೆ
ಬ್ಯಾಡಗಿ,ಸೆ.3: ಸರ್ಕಾರಗಳು ಜಾರಿಗೊಳಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಕೇವಲ ಸಂಬಂಧಿಸಿದ ಇಲಾಖೆಗೆ ಮಾತ್ರ ಸೀಮಿತವಲ್ಲ, ಅದು ಪ್ರತಿಯೊಂದು ಇಲಾಖೆಯ ಜವಾಬ್ದಾರಿಯೂ ಸಹ ಆಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಅಮೂಲ್ ಜೆ ಹಿರೇಕುಡಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ತಾಲೂಕ ಕಾನೂನು ಸೇವೆಗಳ ಸಮಿತಿ, ನ್ಯಾಯಾಧೀಗಳ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕತೆ ಎನ್ನುವುದು ಪ್ರಾಪ್ತ ವಯಸ್ಸಿನವರಿಗೆ ಮಾತ್ರವಲ್ಲದೆ, ಪ್ರಸವಪೂರ್ವ ಮಗುವಿಗೂ ಅವಶ್ಯ, ಅದಕ್ಕಾಗಿ ಸರ್ಕಾರದ ಯೋಜನೆಗಳನ್ನು ಸಮಾಜಕ್ಕೆ ಹತ್ತಿರವಾಗಿರುವ ಅಂಗನವಾಡಿ ಕೇಂದ್ರಗಳ ಮೂಲಕ ತಲುಪಿಸಲಾಗುತ್ತದೆ, ಎಲ್ಲ ಇಲಾಖೆಗಳು ಕೈಜೋಡಿಸಿದಾಗ ಪೌಷ್ಟಿಕತೆ ಬೆಂಬಲಿಸುವ, ಆರೋಗ್ಯ ಪೆÇೀಷಿಸುವ ಕೆಲಸವಾಗುತ್ತದೆ ಎಂದರು.
ಸಿಡಿಪಿಓ ವೈ.ಟಿ.ಪೂಜಾರ ಮಾತನಾಡಿ, ಅಪೌಷ್ಟಿಕತೆಯಿಂದಾಗಿ ಹಲವು ಅನಾರೋಗ್ಯದ ಸಮಸ್ಯೆಗಳು ಉದ್ಭವಿಸಿ, ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ, ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ, ಗರ್ಭಿಣಿಯ ಪೌಷ್ಟಿಕ ಮಟ್ಟದ ಆಹಾರ ಸೇವನೆಯ ಮೇಲೆ ಆಕೆಗೆ ಹುಟ್ಟುವ ಮಗುವಿನ ಆರೋಗ್ಯ ನಿರ್ಧಾರವಾಗುತ್ತದೆ, ರಕ್ತಹೀನತೆಯು ಗರ್ಭಿಣಿ, ಬಾಣಂತಿ ಸಾಮಾನ್ಯ ಸಮಸ್ಯೆಯಾಗಿದೆ, ಪ್ರತಿದಿನ ಸಮತೋಲನ ಆಹಾರ ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತಹೀನತೆಯನ್ನು ತಡೆಗಟ್ಟಬಹುದು, ಎಲ್ಲರೂ ಪ್ರತಿದಿನ ಏಕದಳ, ದ್ವಿವಳ ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಹಾಗೂ ಹಣ್ಣು-ಹಂಪಲು ಸೇವಿಸುವುದರಿಂದ ಪೌಷ್ಟಿಕ ಮಟ್ಟ ಹೆಚ್ಚುತ್ತದೆ, ಜೀವ ಮತ್ತು ಜೀವನಕ್ಕೆ ಪೌಷ್ಟಿಕ ಆಹಾರ ಸೇವನೆ ಅತ್ಯವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ, ನ್ಯಾಯವಾದಿಗಳಾದ ಎಫ್.ಎಂ. ಮುಳಗುಂದ, ಸಂತೋಷ ಹಾಲುಂಡಿ, ಬಿ.ಜಿ ಹಿರೇಮಠ, ಎಂ.ಪಿ. ಹಂಜಗಿ, ಎನ್.ಬಿ.ಬಡಿಗೇರ, ಭಾರತಿ ಕುಲಕರ್ಣಿ, ಎಸ್.ಹೆಚ್.ಕಾಟೇನಹಳ್ಳಿ, ಎಸ್.ಎಸ್.ಕೊಣ್ಣೂರ, ಎಂ.ಜೆ.ಪಾಟೀಲ, ನಾಗರಾಜ ಬಣಕಾರ, ಆರೋಗ್ಯ ಸಹಾಯಕ ಪ್ರಶಾಂತ ನವಲೆ, ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸೇರಿದಂತೆ ಇನ್ನಿತರರಿದ್ದರು,