ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.03:– ಮೋಸದ ಕಂಪನಿ ಹಾಗೂ ಸೊಸೈಟಿಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ಠೇವಣಿದಾರರಿಗೆ ಹಣ ಕೊಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಂಪನಿಗಳಲ್ಲಿ ಠೇವಣಿದಾರರು ಹೂಡಿಕೆ ಮಾಡಿದ ಹಣವನ್ನು ಅರ್ಜಿ ಹಾಕಿದ 180 ದಿನಗಳಲ್ಲಿ ಮರುಪಾವತಿ ಮಾಡಬೇಕೆಂಬ ಕಾನೂನಿದೆ. ಆದರೆ ಕಾನೂನು ಜಾರಿಯಾಗಿ 5 ವರ್ಷವಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡ್ಸ್ ಕಾಯ್ದೆ 2018ರ ಅಡಿಯಲ್ಲಿ ಸಂತ್ರಸ್ತರಿಂದ ಅರ್ಜಿಗಳನ್ನು ತೆಗೆದುಕೊಂಡ ನಂತರ ಅವರ ಹಣವನ್ನ ಕಾನೂನುಬದ್ಧವಾಗಿ ಹಿಂದಿರುಗಿಸಿಲ್ಲ. ಇದರಿಂದ ಕೋಟ್ಯಂತರ ಜನರಿಗೆ ಅನ್ಯಾಯವಾಗಿದೆ. ಇದು ಶಾಶ್ವತ ಕಾಯ್ದೆಯಾಗಿದ್ದು, ಇದರ ಅಡಿಯಲ್ಲಿ ನೇಮಕಗೊಂಡ ಅಧಿಕಾರಿ ಕಾಯಂ ಆಧಾರದ ಮೇಲೆ ವಿಚಾರಣೆ ನಡೆಸಬೇಕು. ಆದರೆ, ಕಳೆದ 5 ವರ್ಷಗಳಲ್ಲಿ ಆರಂಭವೇ ಆಗಿಲ್ಲ. ಇದುವರೆಗೆ ಹಲವು ರಾಜ್ಯಗಳಲ್ಲಿ ಅರ್ಜಿಗಳಿಗೆ ನೋಟಿಸ್ ನೀಡಲಾಗಿಲ್ಲ. ಈ ಸಮಗ್ರ ಕಾಯ್ದೆ ಕಡೆಗಣಿಸಿ ಸಹಾರಾ ಸಿಆರ್‍ಸಿಯು ಸೆಬಿ ಪಲ್ರ್ಸ್‍ನಂತಹ ಪೋರ್ಟಲ್‍ಗಳನ್ನು ತೆರೆಯುವುದಾಗಿ ಭರವಸೆ ನೀಡುವ ಮೂಲಕ ಬಡ್ಸ್ ಕಾಯ್ದೆಯನ್ನು ನಾಶಮಾಡಲು ಕಾನೂನುಬಾಹಿರ ಪಿತೂರಿ ನಡೆಯುತ್ತಿದೆ ಎಂದು ಕಿಡಿ ಕಾರಿದರು.
ನಗರ, ಗ್ರಾಮಗಳಲ್ಲಿ ಲಕ್ಷಾಂತರ ಜನರು ವಂಚನೆಗೆ ಬಲಿಯಾದವರಿದ್ದಾರೆ. ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರ್ಕಾರಿ ಸಂಸ್ಥೆಗಳು ಮತ್ತು ದರೋಡೆಕೋರರು ದೋಚಿದ್ದಾರೆ. ಜಿಲ್ಲಾಡಳಿತ ಮತ್ತು ಸಕ್ಷಮ ಅಧಿಕಾರಿಗಳು ಪದೇ ಪದೇ ಅರ್ಜಿ ಸಲ್ಲಿಸಿದರೂ ಹಿಂತಿರುಗಿಸುತ್ತಿಲ್ಲ. ಇದರಿಂದ ಲಕ್ಷಾಂತರ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಹಸಿವಿನಿಂದ ಸಾಯುವ ರೀತಿಯೂ ಎದುರಾಗಿದೆ. ಹೀಗಾಗಿ ಕಾನೂನಿನಡಿಯಲ್ಲಿ ಪಾವತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಂಸತ್ತು, ಸರ್ಕಾರ ಮತ್ತು ಕಾನೂನಿನ ಘನತೆ ಉಳಿಸಬೇಕು. ವಂಚನೆಗೊಳಗಾದ ಸಂತ್ರಸ್ತರ ಠೇವಣಿ ಹಣವನ್ನು ಕೂಡಲೇ ಪಾವತಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಲ್ಲಾಭಕ್ಷ್, ವೆಂಕಟರಾಮು.ಹೆಚ್.ಎಂ, ಎಂ.ಎಸ್.ರಾಮಮೂರ್ತಿ, ಹರೀಶ್, ಹೆಚ್.ಎಂ.ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.