ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸೌಭಾಗ್ಯ ಆಯ್ಕೆ: ಮೈತ್ರಿಗೆ ಹಿನ್ನಡೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.03: ಕೆ.ಆರ್.ಪೇಟೆ ಪಟ್ಟಣ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಭಾಗ್ಯ ಉಮೇಶ್ ಆಯ್ಕೆಯಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಹಿನ್ನಡೆಯಾಗಿದೆ.
ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಸೌಭಾಗ್ಯ ಉಮೇಶ್ 13 ಮತಗಳನ್ನು ಪಡೆದರೆ ಬಿಜೆಪಿ-ಜೆಡಿಎಸ್ ಮೈತಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಲ್ಪನಾ ದೇವರಾಜು 11 ಮತಗಳನ್ನು ಪಡೆದು ಪರಾಭವಗೊಂಡರು.
ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಿರಿಸಿ ಚುನಾವಣಾ ಆಯೋಗ ಸೆ.02 ಸೋಮವಾರ ಚುನಾವಣೆ ನಿಗಧಿ ಪಡಿಸಿತ್ತು. ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಕೆ.ಸಿ.ಮಂಜುನಾಥ್ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಕೆ.ಸಿ.ಮಂಜುನಾಥ್ . ಕೆ.ಸಿ.ಮಂಜುನಾಥ್ ಅವರ ಅರ್ಜಿಯನ್ನು ಪುರಸ್ಕರಿಸಿದ ರಾಜ್ಯ ಹೈಕೋರ್ಟ್ ಆ.31 ರಂದು ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಆದರೆ ಉಪಾಧ್ಯಕ್ಷರ ಆಯ್ಕೆಗೆ ಯಾವುದೇ ತಡೆಯಿಲ್ಲದ ಕಾರಣ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಬಾಧಿತವಾಗಿ ನಡೆಯಿತು.
ಪಟ್ಟಣದ ಶಹರಿ ರೋಜ್‍ಗಾರ್ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸೌಭಾಗ್ಯ ಉಮೇಶ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಲ್ಪನಾ ದೇವರಾಜು ನಾಮಪತ್ರ ಸಲ್ಲಿಸಿದರು.
ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಿದ್ದು ಶಾಸಕ ಹೆಚ್.ಟಿ.ಮಂಜು ಸೇರಿ ಒಟ್ಟು 24 ಜನ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪುರಸಭೆಯ 23 ಜನ ಸದಸ್ಯರಲ್ಲಿ ಕಾಂಗ್ರೆಸ್ 10, ಜೆಡಿಎಸ್ 11, ಬಿಜೆಪಿ 01 ಮತ್ತು 01 ಪಕ್ಷೇತರ ಸದಸ್ಯರು. ಇದ್ದಾರೆ. 11 ಜನ ಜೆಡಿಎಸ್ ಸದಸ್ಯರು ಜೆಡಿಎಸ್ ಪಕ್ಷದ ಚಿಹ್ನೆಯ ಮೇಲೆ ಜಯಗಳಿಸಿದ್ದರು ಕಳೆದ ಪುರಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಶಾಸಕ ಹಾಗೂ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರನ್ನು ಬೆಂಬಲಿಸಿ ನಾರಾಯಣಗೌಡ ಬೆಂಬಲಿಗರ ಪಡೆ ಸೇರಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡ ಪರಾಭವಗೊಂಡ ಅನಂತರ ಪುರಸಭೆಯ ನಾಲ್ವರು ಜೆಡಿಎಸ್ ಸದಸ್ಯರು ಮಾತೃ ಪಕ್ಷಕ್ಕೆ ಮರಳಿದ್ದರೆ ಉಳಿದ ಏಳು ಜನ ಸದಸ್ಯರು ಬಿಜೆಪಿ ಕೆ.ಸಿ.ನಾರಾಯಣಗೌಡ ಬಣದಲ್ಲಿಯೇ ಗುರಿತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ್ದರೂ 18 ನೇ ವಾರ್ಡಿನ ಸದಸ್ಯೆ ಕಲ್ಪನಾ ಕಳೆದ ಪುರಸಭೆಯ ಚುನಾವಣೆಯ ಸಂದರ್ಭದಲ್ಲಿಯೇ ಕೆ.ಸಿ.ನಾರಾಯಣಗೌಡ ಬಣ ಸೇರಿದ್ದರು. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಬಲ 09 ಕ್ಕೆ ಕುಸಿದಿತ್ತು. ಆದರೆ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಕಾಂಗ್ರೆಸ್ಸಿನ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಹೆಚ್.ಎನ್.ಪ್ರವೀಣ, ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್, ಪಂಕಜಪ್ರಕಾಶ್, ಸುಗುಣರಮೇಶ್, ಖಮರುಲ್ಹಾ ಬೇಗಂ, ಅಭ್ಯರ್ಥಿ ಸೌಭಾಗ್ಯಉಮೇಶ್ ಸೇರಿ 09, ಜೆಡಿಎಸ್ ಪಕ್ಷದ ಪದ್ಮರಾಜು, ಇಂದ್ರಾಣಿವಿಶ್ವನಾಥ್, ಹೆಚ್.ಡಿ.ಅಶೋಕ್ ಮತ್ತು ಪಕ್ಷೇತರ ಸದಸ್ಯ ತಿಮ್ಮೇಗೌಡ ಸೇರಿ 13 ಜನ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
ಮೈತ್ರಿ ಅಭ್ಯರ್ಥಿ ಕಲ್ಪನ ದೇವರಾಜು ಪರ ಮತದಾನದ ಹಕ್ಕು ಹೊಂದಿದ್ದ ಶಾಸಕ ಹೆಚ್.ಟಿ.ಮಂಜು, ಜೆಡಿಎಸ್ ಸದಸ್ಯ ಗಿರೀಶ್, ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿದ್ದರೂ ಬಿಜೆಪಿಯ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬಣದಲ್ಲಿ ಗುರುತಿಸಿಕೊಂಡಿರುವ ಸದಸ್ಯರಾದ ಮಹದೇವಿನಂಜುಂಡ, ಗಾಯಿತ್ರಿಸುಬ್ಬಣ್ಣ, ಶುಭಗಿರೀಶ್, ಶೋಭಾದಿನೇಶ್, ಕೆ.ಎಸ್.ಪ್ರಮೋದಕುಮಾರ್, ಬಸ್ ಕೆ.ಎಸ್.ಸಂತೋಷ್‍ಕುಮಾರ್, ಹೆಚ್.ಆರ್.ಲೋಕೇಶ್, ಬಿಜೆಪಿಯ ಏಕೈಕ ಚುನಾಯಿತ ಸದಸ್ಯ ನಟರಾಜು ಮತ್ತು ಅಭ್ಯರ್ಥಿ ಕಲ್ಪನಾ ದೇವರಾಜು ಸೇರಿ ಒಟ್ಟು 11 ಮಂದಿ ಬೆಂಬಲ ಸೂಚಿಸಿದರು. 13 ಸದಸ್ಯರ ಬೆಂಬಲ ಪಡೆದ ಸೌಭಾಗ್ಯ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಆದರ್ಶ ಪ್ರಕಟಿಸಿದರು.
ಅಭಿನಂದನೆ: ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸೌಭಾಗ್ಯ ಅವರನ್ನು ಪುರಸಭೆಯ ಕಾಂಗ್ರೆಸ್ ಸದಸ್ಯರು ಸೇರಿದಂತೆ ತಾಲೂಕು ಕಾಂಗ್ರೆಸ್ ಮುಖಂಡರು ಅಭಿನಂಧಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಉಪಾಧ್ಯಕ್ಷರನ್ನು ಅಭಿನಂಧಿಸಿದ ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರಕುಮಾರ್, ಕೆ.ಪಿ.ಸಿ.ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಉಸ್ತುವಾರಿ ಚಿನಕರುಳಿ ರಮೇಶ್, ಜಿ.ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾ.ಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್ ಸೇರಿದಂತೆ ನೂರಾರು ಜನ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಕ್ಕ ಅಧಿಕಾರದಲ್ಲಿ ನಾವು ಮಾಡುವ ಒಳ್ಳಯ ಕೆಲಸಗಳು ಮುಖ್ಯ, ಅಧಿಕಾರ ಸಿಕ್ಕಾಗ ನಮ್ಮ ನಡವಳಿಕೆ ಚೆನ್ನಾಗಿರಬೇಕು. ಎಲ್ಲ ಸದಸ್ಯರನ್ನೂ ಒಗ್ಗೂಡಿಸಿಕೊಂಡು ಪಟ್ಟಣದ ಅಭಿವೃದ್ದಿಗೆ ಗಮನ ಹರಿಸಬೇಕು. ಪುರಸಭೆಯ ಅಭಿವೃದ್ದಿ ಕೆಲಸಗಳಿಗೆ ಸರ್ಕಾರದಿಂದ ಅಗತ್ಯವಾದ ನೆರವು ಕೊಡಿಸಲು ನಾವು ಸಿದ್ದರಿದ್ದೇವೆಂದರು. ಮುಖಂಡ ಬಿ.ಎಲ್.ದೇವರಾಜು ಮಾತನಾಡಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯಲು ಶ್ರಮಿಸಿದ ಮಳವಳ್ಳಿಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಪಾತ್ರವನ್ನು ಸ್ಮರಿಸಿದರು.