ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.03:- ಪಟ್ಟಣದ ಹೊರ ವಲಯದಲ್ಲಿ ಕಾವೇರಿ ನದಿಯ ದಡದಲ್ಲಿರುವ ಅರ್ಕೇಶ್ವರ ದೇವಾಲಯದ ಬಳಿ ರೈಲ್ವೆ ರಕ್ಷಣಾ ಪಡೆ (ಆರ್‍ಎಫ್‍ಪಿ) ತರಬೇತಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮಂಡ್ಯ ಸಂಸದರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಪೂರಕ ವರದಿ ಸಲ್ಲಿಸಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಪ್ರಸ್ತಾವಿತ ಹೊಸ ತರಬೇತಿ ಕೇಂದ್ರವನ್ನು ಇಲ್ಲಿ ಸ್ಥಾಪಿಸಿದರೆ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಹಾಯವಾಗಲಿದೆ.
ಈ ಎರಡೂ ಜಿಲ್ಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅನುವಾಗಲಿದೆ ಎಂಬುದನ್ನು ಪರಿಗಣಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಹೊಸದಿಲ್ಲಿಗೆ ತೆರಳಿ ಕೇಂದ್ರ ಸಚಿವ ಹೆಚ್‍ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು.