ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.03: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಸಿ.ಬಿ.ಚೇತನ್‍ಕುಮಾರ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಎಸ್.ಡಿ.ಎಂ.ಸಿ ಆಯ್ಕೆ ಸಂಬಂಧ ಕೆಪಿಎಸ್ ಶಾಲಾ ಆವರಣದಲ್ಲಿರುವ ಪ್ರೀಕೆಜಿ ವಿಭಾಗದಿಂದ ಒಬ್ಬರು, ಉರ್ದು ಶಾಲೆಯಿಂದ ಒಬ್ಬರು, ಪ್ರಾಥಮಿಕ ಶಾಲಾ ವಿಭಾಗದಿಂದ ಐದು ಮಂದಿ, ಪ್ರೌಢಶಾಲಾ ವಿಭಾಗದಿಂದ ಆರು ಮಂದಿ ಮತ್ತು ಕಾಲೇಜು ವಿಭಾಗದಿಂದ ಮೂವರು ಸೇರಿದಂತೆ ಒಟ್ಟಾರೆ 16 ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಕೆಪಿಎಸ್ ಶಾಲೆಗೆ ಶಾಸಕರು ಅಧ್ಯಕ್ಷರಾಗಿದ್ದು ಉಪಾದ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಸಿ.ಬಿ.ಚೇತನ್‍ಕುಮಾರ್ ಒಂಭತ್ತು ಮತಗಳನ್ನು ಪಡೆದರೆ ಪ್ರತಿಸ್ಪರ್ದಿ ಗಂಗಾಧರ 5 ಮತಗಳನ್ನು ಪಡೆದರು. ಹೀಗಾಗಿ ಸಿ.ಬಿ.ಚೇತನ್‍ಕುಮಾರ್ ಕೆ.ಪಿ.ಎಸ್. ಶಾಲೆಯ ಉಪಾದ್ಯಕ್ಷರಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಡಿ.ಬಿ.ಸತ್ಯ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಹೆಚ್.ವಿ.ತಿಮ್ಮೇಗೌಡ, ಪುರಸಬಾ ಮಾಜಿ ಸದಸ್ಯ ಕೆ.ಆರ್.ಪುಟ್ಟಸ್ವಾಮಿ,ವಾಸುದೇವ, ಉಪನ್ಯಾಸಕರು ಸೇರಿದಂತೆ ನೂತನ ಎಸ್‍ಡಿಎಂಸಿ ಸದಸ್ಯರುಗಳು ಹಾಜರಿದ್ದರು.