ಅಂತ್ಯ ಸಂಸ್ಕಾರ ನೇರವೇರಿಸಲು ವಿಶ್ವಕರ್ಮ ಸಮುದಾಯಕ್ಕೆ ರುದ್ರಭೂಮಿ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ ಸೆ.03- ತಾಲೂಕಿನ ಚಂದಕವಾಡಿ ಹೋಬಳಿ ವಿಶ್ವಕರ್ಮ ಸಮೂದಾಯಕ್ಕೆ ರುದ್ರಭೂಮಿ ಇಲ್ಲದೇ ಅಂತ್ಯ ಸಂಸ್ಕಾರ ನೇರವೇರಿಸಲು ತೊಂದರೆ ಉಂಟಾಗಿದ್ದು, ಕೂಡಲೇ ಜಾಗ ಗುರುತಿಸಿಕೊಡಬೇಕೆಂದು ಶ್ರೀ ವಿಶ್ವಕರ್ಮ ಕುಶಲಕರ್ಮಿಗಳ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಸಂಘದ ಅಧ್ಯಕ್ಷ ಮಂಜುನಾಥ್ ವಿಶ್ವಕರ್ಮ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸೌಭಾಗ್ಯ, ಜಿಲ್ಲಾ ಅಧ್ಯಕ್ಷೆ ಭಾಗ್ಯ ಸೋಮಣ್ಣಚಾರ್, ಮುಖಂಡರಾದ ನಾಗೇಂದ್ರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ರುದ್ರಭೂಮಿ ಇಲ್ಲದಿರುವ ಕುರಿತು ಆಗುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್ ಅವರು 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಚಂದಕವಾಡಿ ಸಮೀಪದ ಸರಗೂರು ಗ್ರಾಮದಲ್ಲಿ ತಲಾ ತಲಾಂತರಗಳಿಂದ ಖಾಸಗಿಯವರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದ್ದು, ಇತ್ತೀಚೆಗೆ ಜಮೀನಿನ ಮಾಲೀಕರು ಅಂತ್ಯ ಸಂಸ್ಕಾರ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ, ಇದರಿಂದ ಅಂತ್ಯಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ. ಸರ್ಕಾರದಿಂದ ರುದ್ರಭೂಮಿ ಕಲ್ಪಿಸುವಂತೆ ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯ್ತಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನಮ್ಮ ಸಮಾಜಕ್ಕೆ ಭೂಮಿ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಶಶಿಕುಮಾರ್, ಬಸವಣ್ಣ, ರವಿಕುಮಾರ್, ರಂಗಸ್ವಾಮಿ, ಪವನ್, ಮಹದೇವಸ್ವಾಮಿ, ವಿನೋದ್ ಕುಮಾರ್, ರವಿ, ಸಿದ್ದರಾಜು, ದೊಡ್ಡ ಸಿದ್ದಚಾರ್, ಸಿದ್ದಲಿಂಗಾಚಾರ್, ತಮ್ಮಯ್ಯಚಾರ್, ಮಹೇಂದ್ರ, ಗಿರೀಶ್, ಲಕ್ಷ್ಮಣಾಚಾರ್, ನಾಗರಾಜಚಾರ್, ಪಳನಿಚಾರ್, ಮಹೇಶ್, ಲೋಕೇಶ್. ಸತೀಶ್, ನಂಜುಂಡಸ್ವಾಮಿ ಸೇರಿದಂತೆ ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ತಮ್ಮಡಹಳ್ಳಿ ಭಾಗಗಳಿಂದ ಜನಾಂಗದ ಅನೇಕರು ಭಾಗವಹಿಸಿದ್ದರು.